ಬೆಂಗಳೂರು ಜ.3- ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತಂತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅಧಿವೇಶನದಲ್ಲಿಂದು ಬಿಡಿಸಿಟ್ಟರು. ನಿಯಮ 69ರ ಅಡಿ ಸಾರ್ವಜನಿಕ ಮಹತ್ವದ ವಿಷಯವನ್ನಾಗಿ ಚರ್ಚೆಗೆ ಕೈಗೆತ್ತಿಕೊಂಡ ಅಶೋಕ್ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎಲ್ಲಾ ಇಲಾಖೆಗಳಿಗಿಂತಲೂ ಅಬಕಾರಿ ಇಲಾಖೆ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ.
ಪ್ರತಿಯೊಂದು ಮದ್ಯದ ಅಂಗಡಿಯಿಂದಲೂ ಮಂತ್ಲಿ ನಿಗದಿಯಾಗಿದೆ. ವರ್ಗಾವಣೆ, ಹೊಸ ಪರವಾನಗಿ ನೀಡಲು, ನವೀಕರಣ ಮಾಡಲು, ಹೆಸರು ಬದಲಾವಣೆಗೂ ದರ ಪಟ್ಟಿ ನಿಗದಿಯಾಗಿದೆ ಎಂದು ವಿವರಿಸಿದರು. ಅಬಕಾರಿ ಇಲಾಖೆಗೆ ಸಂಬಂಧಪಟ್ಟಂತೆ ದಿನಕ್ಕೊಂದು ಆಡಿಯೋ ವಿಡಿಯೋಗಳು ಹೊರ ಬರುತ್ತಿವೆ. ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ರಾಜ್ಯದಲ್ಲಿ ಭ್ರಷ್ಟಾಚಾರದ ಮೂಲಕ ಹಣ ಸಂಗ್ರಹಿಸಿ ಬೇರೆ ರಾಜ್ಯಗಳ ವಿಧಾನಸಭಾ ಚುನಾವಣೆಗೆ ರವಾನಿಸಲಾಗುತ್ತಿದೆ ಎಂಬ ಆರೋಪವಿದೆ ಎಂದರು.
ಗೃಹ ಮಂಡಳಿಯಿಂದ ಹುಬ್ಬಳ್ಳಿಯಲ್ಲಿ ನಡೆದ ಮನೆ ಹಂಚಿಕೆ ಕಾರ್ಯಕ್ರಮಕ್ಕೆ ಸಚಿವರು, ಕಾಂಗ್ರೆಸ್ಸಿನ ಕಾರ್ಯಕರ್ತರು ಪ್ರಮುಖರು ಭಾಗವಹಿಸುತ್ತಾರೆ. ಎಲ್ಲಾ ಮಧ್ಯದ ಸನ್ನದುದಾರರು ಸಾಕಷ್ಟು ಮದ್ಯವನ್ನು ದಾಸ್ತಾನು ಮಾಡಿಕೊಂಡು ಮಾರಾಟ ಮಾಡುವ ಮೂಲಕ ಲಾಭ ಮಾಡಿಕೊಳ್ಳುವಂತೆ ಅಬಕಾರಿ ಇಲಾಖೆಯ ಅಧಿಕಾರಿಯೇ ಅಧಿಕೃತವಾದ ಸಂದೇಶ ರವಾನಿಸಿದ್ದಾರೆ. ಮದ್ಯ ಮಾರಾಟಕ್ಕೆ ಗುರಿ ನಿಗದಿಪಡಿಸ ಲಾಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ಮಹಾತ್ಮ ಗಾಂಧಿಜಿಯವರ ಹೆಸರು ಹೇಳುವ ನೈತಿಕತೆ ಇಲ್ಲ. ಗಾಂಧಿಜಿಯವರ ಆದರ್ಶ ಸಿದ್ಧಾಂತಗಳನ್ನು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿದರು.
ಹೆಚ್ಚು ಮದ್ಯ ಸಂಗ್ರಹಿಸಿ ಮಾರಾಟ ಮಾಡಿ ಎಂದು ಸಂದೇಶ ನೀಡಿರುವ ಅಽಕಾರಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರೆ ಸರ್ಕಾರವೇ ಶಾಮೀಲಾಗಿದೆ ಎಂದರ್ಥ. ತಾವು ಅಸಹಾಯಕರಲ್ಲ ಎಂದು ಸಿದ್ದರಾಮಯ್ಯ ನಿನ್ನೆ ವಿಧಾನಸಭೆಯಲ್ಲಿ 12 ಬಾರಿ ಹೇಳಿದ್ದಾರೆ. ತಮ್ಮದು ಸಂವೇದನಾಶೀಲ ಸರ್ಕಾರ ಎಂದು ಸಮರ್ಥಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಏಕೆ ವೌನ ಮುರಿದಿಲ್ಲ ? ಎಂದು ಪ್ರಶ್ನಿಸಿದರು. ಮಧ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಎಂದು ಹೆಸರು ಹೇಳಲು ಅಶೋಕ್ ಅವರು ತಡಕಾಡುವಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷ ಹೆಸರು ಗುರುಸ್ವಾಮಿ. ಆತ ತಮ್ಮ
ಊರಿನ ಪಕ್ಕದ ಪಂಚಾಯಿತಿಯವರು. ನಾನು ತಾಲ್ಲೂಕು ಮಂಡಳಿ ಸದಸ್ಯನಾಗಿದ್ದಾಗ ಆತ ಅಧ್ಯಕ್ಷನಾಗಿದ್ದ ಎಂದು ಹೇಳಿದರು.
ಮುಂದುವರೆದ ಅಶೋಕ್, ಗುರುಸ್ವಾಮಿ ಅವರು ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿ ಅಬಕಾರಿ ಇಲಾಖೆ ಭ್ರಷ್ಟಾಚಾರದ ಬಗ್ಗೆ ಗಂಭೀರ ಆರೋಪ ಮಾಡಿರುವುದನ್ನು ಎಳೆ ಎಳೆಯಾಗಿ ವಿವರಿಸಿದರು. ಕಾಂಗ್ರೆಸ್ ಸರ್ಕಾರ ಯಾರಿಗೂ ಗೊತ್ತಿಲ್ಲದಂತೆ 586 ಮಧ್ಯದಂಗಡಿಗಳ ಪರವಾನಗಿಯನ್ನು ಹರಾಜು ಹಾಕಿದೆ. ಹೊಸದಾಗಿ ಎರಡು ಸಾವಿರ ಪರವಾನಗಿಗಳನ್ನು ನೀಡಲಾಗಿದೆ. ಆಂಧ್ರಪ್ರದೇಶದ ಉದ್ಯಮಿಗಳು ಎಲ್ಲವನ್ನೂ ಪಡೆದುಕೊಂಡಿದ್ದಾರೆ. ಇದನ್ನು ವಿರೋಧಿಸಿ ರಾಜ್ಯದ ಸಂಘದವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ ಎಂದರು.
ಸಚಿವ ಆರ್ ಬಿ ತಿವ್ಮಾಪುರ್ ಹೇಳಿಕೆ ನೀಡಿ ಅಬಕಾರಿ ಭ್ರಷ್ಟಾಚಾರದಲ್ಲಿ ನನ್ನ ಅಥವಾ ನನ್ನ ಮಗನ ಪಾತ್ರ ಇಲ್ಲ ಎಂದಿದ್ದಾರೆ. ಆದರೆ ಎರಡು ತಿಂಗಳ ಹಿಂದೆಯೇ ಅಬಕಾರಿ ಇಲಾಖೆಯ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟಂತೆ ಮೊದಲ ಆಡಿಯೋ ಹೊರ ಬಂದಿತ್ತು. ಎರಡು ತಿಂಗಳ ನಂತರ ಮತ್ತೊಂದು ಆಡಿಯೋ ಪ್ರಕಟವಾಗಿದೆ. ಕೊನೆಗೆ ಅಬಕಾರಿ ಇಲಾಖೆಯ ಡಿಸಿಯನ್ನು ಲೋಕಾಯುಕ್ತ ಪೊಲೀಸರು ಬಂದಿಸಿದ್ದಾರೆ. ಆದರೂ ಅಬಕಾರಿ ಸಚಿವರು ಎಚ್ಚೆತ್ತುಕೊಂಡಿಲ್ಲ ಎಂದು ಆರಂಭಿಸಿದರು.
Laxmi News 24×7