Breaking News

ಪ್ರಧಾನಿಗೆ ಅವಹೇಳನ: ವಿಧಾನ ಪರಿಷತ್‌ ನಲ್ಲಿ ಕೋಲಾಹಲ, ನಜೀರ್‌ ಕ್ಷಮೆಗೆ ಬಿಜೆಪಿ ಪಟ್ಟು

Spread the love

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್‌‍ ಸದಸ್ಯ ನಸೀರ್‌ ಅಹದ್‌ ಕ್ಷಮೆ ಕೇಳಬೇಕೆಂದು ಪ್ರತಿಪಕ್ಷ ಬಿಜೆಪಿ ಸದಸ್ಯರು ಪಟ್ಟು ಹಿಡಿದು ಗದ್ದಲ ಎಬ್ಬಿಸಿದ ಪರಿಣಾಮ ವಿಧಾನ ಪರಿಷತ್‌ ಕಲಾಪವನ್ನು ಸಭಾಪತಿ ಕೆಲಕಾಲ ಮುಂದೂಡಿದ ಪ್ರಸಂಗ ಜರುಗಿತು.

ಸಭಾಪತಿ ಬಸವರಾಜ್‌ ಹೊರಟ್ಟಿ ಅವರು, ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್‌‍ ಸದಸ್ಯ ನಸೀರ್‌ ಅಹಮದ್‌ಗೆ ಪೀಠದಿಂದ ಸ್ಪಷ್ಟ ಸೂಚನೆ ನೀಡಿದರು. ನಾನು ಕ್ಷಮೆ ಕೇಳುವುದಿಲ್ಲ. ಬೇಕಿದ್ದರೆ, ಪೀಠದಿಂದ ಆದೇಶವಾಗಲಿ ಎಂದು ತಮ ಪಟ್ಟಿನಿಂದ ಹಿಂದೆ ಸರಿಯದ ಕಾರಣ ಸದನದಲ್ಲಿ ಗದ್ದಲ ಉಂಟಾದ ಪರಿಣಾಮ ಮುಂದೂಡಲಾಯಿತು.

ಇದಕ್ಕೂ ಮುನ್ನ ದಿನದ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ತಮ ಧರಣಿಯನ್ನು ಮುಂದುವರಿಸಿ,ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನಾಲಿಗೆ ಹರಿಬಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ,ನಸೀರ್‌ ಅಹಮದ್‌ ಅವರು ಬೇಷರತ್‌ ಕ್ಷಮೆ ಕೇಳಬೇಕು.ಇಲ್ಲವೇ ಅವರನ್ನು ಸದನದಿಂದ ಹೊರಹಾಕಬೇಕೆಂದು ಗದ್ದಲ ಎಬ್ಬಿಸಿದರು.

ಬಿಜೆಪಿ ಸದಸ್ಯ ಸಿಟಿ ರವಿ ಅವರು ಪ್ರಧಾನಿ ಬಗ್ಗೆ ಇಷ್ಟೊಂದು ಕೀಳಾಗಿ ಮಾತನಾಡಿರುವ ಇವರು ಪಾಕಿಸ್ತಾನದವರಾ? ಅಥವಾ ಭಾರತದವರಾ? ಅಪ್ಪಟ ಭಾರತೀಯ ನಾಲಿಗೆ ಆಗಿದ್ದರೆ ಈ ರೀತಿ ಹೇಳುತ್ತಿರಲಿಲ್ಲ.ಇದು ಪಕ್ಕ ಪಾಕಿಸ್ತಾನದ ನಾಲಿಗೆ ಆಗಿರಬೇಕು.ಮೊದಲು ಸದನದಿಂದ ಹೊರಹಾಕಿ ಎಂದು ಅಬ್ಬರಿಸಿದರು.

ಇದಕ್ಕೆ ಧ್ವನಿಗೂಡಿಸಿದ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ನಸೀರ್‌ ಆಹಮದ್‌ ಉದ್ಧಟನಾಗಿ ಮಾತನಾಡಿದ್ದಾರೆ. ಅವರು ಸದನದಲ್ಲಿ ಕುಳಿತುಕೊಳ್ಳುವ ಅರ್ಹತೆ ಇಟ್ಟುಕೊಂಡಿಲ್ಲ.ಮೊದಲು ಕ್ಷಮಾಪಣೆ ಕೇಳಬೇಕು.ಇಲ್ಲವೇ ಸದನದಿಂದ ಹೊರಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭಾಪತಿ ಬಸವರಾಜ್‌ ಹೊರಟ್ಟಿ ಅವರು, ಸದನದಲ್ಲಿ ನಿಂತು ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಿದ್ದ ಬಿಜೆಪಿ ಸದಸ್ಯರ ವಿರುದ್ಧ ಅಸಮಾಧಾನ ಹೊರಹಾಕಿದರು. ಬಾವಿಯಲ್ಲಿ ನಿಂತು ಧಿಕ್ಕಾರದ ಘೋಷಣೆಗಳನ್ನು ಕೂಗುವಂತಿಲ್ಲ.ನಿಮಗೆ ಸದನದ ನೀತಿ ನಿಯಮಗಳು ಗೊತ್ತಿಲ್ಲವೇ? ಎಂದು ಪ್ರಶ್ನೆ ಮಾಡಿದರು.

ಗದ್ದಲದ ಮಧ್ಯೆ ಬಿಜೆಪಿ ಸದಸ್ಯರು ನಸೀರ್‌ ಅಹಮದ್‌ ವಿರುದ್ಧ ನೀಡಿದ್ದ ಪತ್ರವನ್ನು ಸಭಾಪತಿಯವರು ಓದಿದರು. ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರು ಭಾಷಣದ ವಂದನಾ ನಿರ್ಣಯದ ಮೇಲೆ ಉತ್ತರಿಸುವ ವೇಳೆ ಕಾಂಗ್ರೆಸ್‌‍ ಸದಸ್ಯರಾಗಿರುವ ನಸೀರ್‌ ಆಹಮದ್‌ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶದ್ರೋಹಿ ಎಂದು ಕರೆದಿದ್ದಾರೆ.

ಅವರು ಪದೇಪದೇ ತಮ ಹೇಳಿಕೆಯನ್ನು ಪುನರಾವರ್ತನೆ ಮಾಡಿದ್ದಾರೆ. ದೇಶದ ಪ್ರಧಾನಿ ಬಗ್ಗೆ ಇಷ್ಟು ಲಘುವಾಗಿ ಮಾತನಾಡಿರುವ ಅವರನ್ನು ಸದನದಿಂದ ಅಮಾನತು ಪಡಿಸಬೇಕೆಂದು ಬಿಜೆಪಿ ಸದಸ್ಯರು ತಮಗೆ ಪತ್ರವನ್ನು ಕೊಟ್ಟಿದ್ದಾರೆ ಎಂಬುದನ್ನು ಉಲ್ಲೇಖ ಮಾಡಿ, ಪೀಠದಿಂದ ಕ್ರಮ ತೆಗೆದುಕೊಳ್ಳುವುದು ಬೇಡ. ಕ್ಷಮೆ ಕೇಳಬೇಕು ಎಂದು ನಸೀರ್‌ ಅಹಮದ್‌ ಕ್ಷಮೆಗೆ ಸ್ಪೀಕರ್‌ ಹೊರಟ್ಟಿ ಸೂಚನೆ ನೀಡಿದರು.

ನೀವು ಈ ರೀತಿ ದೇಶದ ಪ್ರಧಾನಿ ಬಗ್ಗೆ ಹೇಳಿಕೆ ನೀಡಿರುವುದು ಇದು ಮೊದಲಲ್ಲ. ಹಲವು ಬಾರಿ ಇದೇ ರೀತಿ ಹೇಳಿಕೆಗಳನ್ನು ಕೊಟ್ಟಿದ್ದೀರಿ. ಒಂದು ಬಾರಿ ಪ್ರಧಾನಿ ಮೋದಿ ಅವರು ದೇಶವನ್ನು ಅದಾನಿ, ಅಂಬಾನಿಗೆ ಮಾರಿದ್ದಾರೆ ಎಂದು ಆರೋಪಿಸಿದ್ದೀರಿ.ಇನ್ನೊಂದು ಬಾರಿ ಮೋದಿಯವರು ದೇಶದ್ರೋಹಿ ಎಂದು ಹೇಳಿದ್ದೀರಿ. ಜವಾಬ್ದಾರಿಯ ಸ್ಥಾನದಲ್ಲಿರುವ ನೀವು ದೇಶದ ಪ್ರಧಾನಿಗಳ ಬಗ್ಗೆ ಮಾತನಾಡುವಾಗ ಎಚ್ಚರದಿಂದ ಮಾತನಾಡಬೇಕು. ಹೀಗಾಗಿ ನಿನ್ನೆಯ ಘಟನೆಗೆ ಸಂಬಂಧಿಸಿದಂತೆ ಕ್ಷಮೆ ಕೇಳಬೇಕೆಂದರು.

ನಸೀರ್‌ ಅಹದ್‌ ಪ್ರತಿಕ್ರಿಯಿಸಿ ನಿನ್ನೆ ಮೋದಿಯವರು ಇಲ್ಲ ಎಂದರೆ, ದೇಶ ಇಲ್ಲ ಎಂದು ಸದಸ್ಯರು ಹೇಳಿದರು.ಹೀಗಾಗಿ ನಾನು ಪ್ರತಿಕ್ರಿಯೆ ನೀಡಿದೆ ಎಂದರು. ಚರ್ಚೆ ನಡೆಯುವ ಮಾತಿಗೆ ಮಾತು ಆಗಿದೆ ಸದನ ನಡೆಸಲು ಅನುವು ಮಾಡಿಕೊಡಿ ಪ್ರತಿಪಕ್ಷದವರಿಂದ ಕೆಲವು ಬಾರಿ ಪ್ರಚೋದನೆ ಕರೆ ಹೇಳಿಕೆಗಳು ಬಂದವು.

ಪ್ರಧಾನಿ ಮೋದಿ ಅವರನ್ನು ವಿಶ್ವಗುರು ಎಂದು ಕರೆಯುತ್ತಾರೆ ನಮಗೆ ವಿಶ್ವಗುರು ಎಂದರೆ ರಾಷ್ಟ್ರಪಿತ ಮಹಾತ ಗಾಂಧಿ.ಮೋದಿಯವರನ್ನು ಹಾಗೆ ಅಂದಾಗ ನಮಗೆ ಆಕ್ರೋಶ ಬರುವುದಿಲ್ಲವೇ ಎಂದು ಪ್ರಶ್ನೆ ಮಾಡಿದರು. ಈ ಹೇಳಿಕೆಗೆ ಸಿಡಿದೆದ್ದ ಬಿಜೆಪಿ ಸದಸ್ಯರು ಸಮರ್ಥನೆ ಬೇಡ ಮೊದಲು ಕ್ಷಮೆ ಕೇಳಿ ಇಲ್ಲವೇ ಸದನದಿಂದ ಹೊರಗೆ ಹಾಕಿ ಎಂದು ಸಭಾಪತಿಗಳ ಮೇಲೆ ಒತ್ತಡ ಹಾಕಿದರು.ಪಾಕಿಸ್ತಾನದವರು ಕೂಡ ಈ ರೀತಿ ಮಾತನಾಡುವುದಿಲ್ಲ ಅಲ್ಲಿನವರೇ ಮೋದಿ ಅವರನ್ನು ಗೌರವಿಸುತ್ತಾರೆ ಇಲ್ಲಿನವರು ಮಾತ್ರ ವಿರೋಧಿಸುತ್ತಾರೆ. ನಾವು ಮುಖ್ಯಮಂತ್ರಿಗಳು ಯಾರೇ ಆದರೂ ಗೌರವಿಸುವುದಿಲ್ಲವೇ ಎಂದರು.

ಛಲವಾದಿ ನಾರಾಯಣಸ್ವಾಮಿ ಮಧ್ಯಪ್ರವೇಶಿಸಿ, ಯಾವುದೇ ಸ್ಪಷ್ಟನೆ ಕೊಡುವುದು ಬೇಡ.ಅವರ ಮೇಲೆ ಕ್ರಮ ಕೈಗೊಳ್ಳಿ ಎಂದಾಗ, ಗದ್ದಲದ ನಡುವೆಯೇ ಮಾತು ಮುಂದುವರಿಸಿದ ನಸೀರ್‌, ನಾನು ಭಾರತದಲ್ಲಿ ಹುಟ್ಟಿದ್ದೇನೆ. ನನ್ನ ನಾಲಿಗೆ ಪಾಕಿಸ್ತಾನ ಸೇರಿದ್ದು ಎಂದು ಹೇಳಿರುವ ಸಿಟಿ ರವಿ ಅವರನ್ನು ಸದನದಿಂದ ಅಮಾನತು ಪಡಿಸಬೇಕು ಎಂದು ತಿರುಗೇಟು ನೀಡಿದರು.
ಆಗ ಬಿಜೆಪಿ ಸದಸ್ಯರು ಸಮರ್ಥನೆ ಮಾಡಿಕೊಳ್ಳಲು ಅವಕಾಶ ಕೊಡಬೇಡಿ, ಕ್ಷಮೆ ಕೇಳಲಿ, ಇಲ್ಲವೇ ಸದನದಿಂದ ಹೊರಹಾಕಿ ಮೊನ್ನೆ ರಾಜ್ಯಪಾಲರ ಬಗ್ಗೆಯೂ ಇದೇ ರೀತಿ ಮಾತನಾಡಿದರು .ಈಗ ಪ್ರಧಾನಿ ಬಗ್ಗೆ ಮಾತನಾಡಿದ್ದಾರೆ. ಮುಂದೆ ರಾಷ್ಟ್ರಪತಿಗಳ ಬಗ್ಗೆ ಮಾತನಾಡುತ್ತಾರೆ ಎಲ್ಲಿವರೆಗೂ ಸಹಿಸಬೇಕೆಂದು ಬಿಜೆಪಿ ಸದಸ್ಯರು ಮುಗಿಬಿದ್ದರು.

ಮೋದಿ ಇಲ್ಲ ಎಂದರೆ ದೇಶ ಇಲ್ಲ ಎನ್ನುತ್ತಾರೆ. ಈ ಹಿಂದೆ ಕಾರ್ಮಿಕರು ಬಡವರು ಬೀದಿಯಲ್ಲಿದ್ದರು ಎಂದು ನಸೀರ್‌ ಹೇಳುತ್ತಿದ್ದಾಗ ಮತ್ತೆ ಗದ್ದಲ ಉಂಟಾಯಿತು.ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಒಂದು ನಸೀರ್‌ ಅವರನ್ನು ಸದನದಿಂದ ಹೊರಹಾಕಿ.ಇಲ್ಲವೇ ನಾವೇ ಆಚೆ ಹೋಗುತ್ತೇವೆ ಯಾವುದಕ್ಕೂ ತೀರ್ಮಾನ ಮಾಡಿ ಎಂದು ಹೇಳಿದರು. ಸಭಾಪತಿಗಳಾಗಿ ನೀವು ರೂಲಿಂಗ್‌ ಕೊಟ್ಟಿದ್ದೀರಿ. ಇಷ್ಟಾದ ಮೇಲೂ ಮತ್ತೆ ವಿಶ್ಲೇಷಣೆ ಬೇಕಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌‍ನ ಶಿವಕುಮಾರ್‌ ಮಾತನಾಡಿ,ಕೆಲವು ಸಂದರ್ಭದಲ್ಲಿ ತಪ್ಪುಗಳು ಆಗುತ್ತದೆ. ಅದು ದುರುದ್ದೇಶದಿಂದ ಕೂಡಿರಲಿಲ್ಲ. ಸದನ ನಡೆಯಲು ಅನುವು ಮಾಡಿಕೊಡಿ ಎಂದು ಮನವಿ ಮಾಡಿದರು.

ಜೆಡಿಎಸ್‌‍ ನ ಭೋಜೇಗೌಡ ಮಾತನಾಡಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾಗಿ ಅವರು ಈ ರೀತಿ ಮಾತನಾಡುವುದು ಸರಿಯಲ್ಲ ಹಿಂದೆಯೂ ಅವರು ಅನೇಕ ಬಾರಿ ಈ ರೀತಿ ಮಾತನಾಡಿದ್ದಾರೆ. ಕ್ಷಮೆ ಕೇಳಿದರೆ ಅವರೇ ದೊಡ್ಡವರಾಗುತ್ತಾರೆ. ಪ್ರಚೋದನೆ ಮಾಡಿದರೆ, ನಾಲಿಗೆಗೂ ಮೆದುಳಿಗೂ ತಪ್ಪುತ್ತಾ.? ನೀವು ಹಿರಿಯರು, ಸಿಎಂಗೆ ಇಂತಹ ಸಲಹೆ ಕೊಡ್ತೀರಾ..ಸದನದ ಸಮಯ ಹಾಳು ಮಾಡಬೇಡಿ ಎಂದು ಮನವಿ ಮಾಡಿದರು.

ಸಭಾಪತಿ ಅವರು, ನಸೀರ್‌ ಅಹಮದ್‌ ನಿನ್ನೆ ನೀವು ಮಾತಾಡಿದ್ದು ಸರಿಯಲ್ಲ. ಎಲ್ಲರಿಗೂ ನೋವು ಆಗಿದೆ, ಕ್ಷಮೆ ಕೋರಿ ಸದನ ನಡೆಸಲು ಅನುವು ಮಾಡಿಕೊಡಿ.ದೇಶದ ಪಿಎಂಗೆ ಅಗೌರವ ತೋರಿದ್ದೀರಿ..ಬೇಷರತ್‌ ಆಗಿ ಕ್ಷಮೆ ಕೇಳಬೇಕು ಎಂದು ಸೂಚಿಸಿದರು.
ಈ ವೇಳೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಮಾತುಕತೆ ನಡೆಸಿದರು. ಸದನ ಸಹಜ ಸ್ಥಿತಿಗೆ ಬರದಿದ್ದಾಗ ಸಭಾಪತಿ ಕಲಾಪವನ್ನು ಕೆಲ ಹೊತ್ತು ಮುಂದೂಡಿದರು.


Spread the love

About Laxminews 24x7

Check Also

ಪರೋಕ್ಷವಾಗಿ ಶಾಸಕ ಯತ್ನಾಳರಿಗೆ ತಿವಿದ ಸಚಿವ ಎಂ.ಬಿ.ಪಾಟೀಲ

Spread the loveವಿಜಯಪುರ: ರಾಜ್ಯಪಾಲರು ಬಿಜೆಪಿಯವರು ಏನ್ ಹೇಳ್ತಾರೆ ಅದನ್ನ ಮಾಡ್ತಾರೆ. ಈ ರೀತಿ ಮಾಡ್ತಾರೆ ಎಂದು ನಮಗೆ ಗೊತ್ತಿತ್ತು.. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ