ಉಡುಪಿ: ಹೊಯ್ಸಳ ಶೌರ್ಯ ಪ್ರಶಸ್ತಿ ವಿಜೇತ, ಉಡುಪಿಯ ಮಾಸ್ಟರ್ ದೀಪೇಶ್ ದೀಪಕ್ ಶೆಣೈ, ಎಸ್ಎಸ್ಎಲ್ಸಿ ಪರೀಕ್ಷೆ ಸಂದರ್ಭ ನಿರಂತರ ವಿದ್ಯುತ್ ಸರಬರಾಜು ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ದೀಪೇಶ್ ದೀಪಕ್ ಶೆಣೈ, ಉಡುಪಿಯ ಟಿ.ಎ. ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ನಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಯಾಗಿದ್ದಾನೆ. ಕಳೆದ ವರ್ಷ ಈತನ ಧೈರ್ಯ ಮತ್ತು ಸಮಯಪ್ರಜ್ಞೆಗೆ ಕರ್ನಾಟಕ ಸರ್ಕಾರದಿಂದ ಅತ್ಯುನ್ನತ ಹೊಯ್ಸಳ ಶೌರ್ಯ ಪ್ರಶಸ್ತಿ ದೊರೆತಿದೆ.
ಸದ್ಯ ತಮ್ಮ ಪ್ರದೇಶದಲ್ಲಿ ನಡೆಯುತ್ತಿರುವ ಅನಿಯಮಿತ ಹಾಗೂ ಅಘೋಷಿತ ವಿದ್ಯುತ್ ಕಡಿತಗಳ ಕುರಿತು ಮಾಸ್ಟರ್ ದೀಪೇಶ್ ದೀಪಕ್ ಶೆಣೈ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನ ಸೆಳೆದಿರುವುದು ವಿಶೇಷ.
“ಮಾರ್ಚ್–ಏಪ್ರಿಲ್ 2026ರಲ್ಲಿ ನಡೆಯಲಿರುವ SSLC ಪರೀಕ್ಷೆಗೆ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ತಯಾರಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಜಾನೆ ಮತ್ತು ರಾತ್ರಿ ಹಗಲಿನ ಸಮಯದಲ್ಲಿ ನಿರಂತರ ವಿದ್ಯುತ್ ಒದಗಿಸಬೇಕು. ಈ ನಿಟ್ಟಿನಲ್ಲಿ ತಕ್ಷಣ ತಾಂತ್ರಿಕ ಪರಿಶೀಲನೆ ಮತ್ತು ದುರಸ್ತಿ ಕ್ರಮಗಳನ್ನು ಕೈಗೊಳ್ಳುವಂತೆ” ವಿದ್ಯಾರ್ಥಿ ದೀಪೇಶ್ ತನ್ನ ಪತ್ರದಲ್ಲಿ ಮನವಿ ಮಾಡಿದ್ದಾನೆ.
Laxmi News 24×7