ಬೆಂಗಳೂರು: ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಡಿಜಿಪಿಯಾಗಿ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅಧಿಕಾರ ಸ್ವೀಕರಿದ ಬೆನ್ನಲ್ಲೆ ರಾಜ್ಯದ ಜೈಲುಗಳಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದಂತೆ ಮಂಗಳೂರು, ಮೈಸೂರು, ವಿಜಯಪುರ, ಬೆಳಗಾವಿ ಜಿಲ್ಲಾ ಕಾರಾಗೃಹಗಳಲ್ಲಿ 36 ಗಂಟೆಗಳ ಕಾಲ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಕೈದಿಗಳ ಬಳಿ ಮೊಬೈಲ್ ಫೋನ್‌ಗಳು, ಚಾಕು, ಮಾದಕ ಪದಾರ್ಥಗಳು ಪತ್ತೆಯಾಗಿವೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ 6 ಮೊಬೈಲ್ ಫೋನ್‌ಗಳು ಹಾಗೂ 4 ಚಾಕುಗಳು, ಮೈಸೂರಿನಲ್ಲಿ 9 ಫೋನ್‌ಗಳು ಹಾಗೂ 11 ಸಿಮ್ ಕಾರ್ಡ್‌ಗಳು, ಬೆಳಗಾವಿಯಲ್ಲಿ 4 ಫೋನ್‌ಗಳು ಹಾಗೂ ದಾಳಿ ಸಂದರ್ಭದಲ್ಲಿ ಹೊರಗೆ ಎಸೆಯಲ್ಪಟ್ಟಿದ್ದ 366 ಗ್ರಾಂ ಗಾಂಜಾ, ವಿಜಯಪುರದಲ್ಲಿ 1 ಫೋನ್ ಹಾಗೂ ಮಂಗಳೂರಿನಲ್ಲಿ 4 ಫೋನ್‌ಗಳು ಪತ್ತೆಯಾಗಿವೆ.

ಕೇಂದ್ರ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳು ಪತ್ತೆ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮಂಗಳವಾರ ರಾತ್ರಿ ಜೈಲಾಧಿಕಾರಿಗಳು ತಪಾಸಣೆ ನಡೆಸಿದ್ದರು. ಈ ವೇಳೆ, ನಿಷೇಧಿತ ವಸ್ತುಗಳು ಸೇರಿದಂತೆ 14 ಮೊಬೈಲ್ ಫೋನ್‌ಗಳು, 9 ಸಿಮ್ ಕಾರ್ಡ್‌ಗಳು, 5 ಮೊಬೈಲ್ ಫೋನ್ ಚಾರ್ಜರ್, 2 ಇಯರ್ ಫೋನ್, 10 ವಿವಿಧ ಬಗೆಯ ಚಾಕುಗಳು ಪತ್ತೆಯಾಗಿದ್ದವು.

ಒಟ್ಟಾರೆ ಇದುವರೆಗೂ 67 ಮೊಬೈಲ್ ಫೋನ್‌ಗಳು, 14 ಚಾರ್ಜರ್ಸ್, 48 ಸಿಮ್ ಕಾರ್ಡ್‌ಗಳು, 10 ಇಯರ್ ಫೋನ್‌ಗಳು, 60,880 ರೂ. ನಗದು, 10 ಹರಿತವಾದ ಆಯುಧಗಳು ಪತ್ತೆಯಾಗಿದ್ದು, ಒಟ್ಟು 6 ಪ್ರಕರಣಗಳು ದಾಖಲಾಗಿವೆ ಎಂದು ಜೈಲಿನ ಮೂಲಗಳು ಮಾಹಿತಿ ನೀಡಿವೆ.
Laxmi News 24×7