Breaking News

ಡಿಕೆಶಿ ಬಳಿ 50 ಶಾಸಕರಿದ್ದರೆ ಇವತ್ತೇ ಮುಖ್ಯಮಂತ್ರಿ ಮಾಡುತ್ತೇನೆ: ರಮೇಶ್ ಜಾರಕಿಹೊಳಿ

Spread the love

ಬೆಳಗಾವಿ : ಡಿ.ಕೆ. ಶಿವಕುಮಾರ್ ಕಡೆ ಶಾಸಕರ ಸಂಖ್ಯೆ ಬಹಳ ಕಡಿಮೆ ಇದೆ. ಸುಮ್ಮನೆ ಟಿವಿಯಲ್ಲಿ ಅಷ್ಟು ಇಷ್ಟು ಅಂತಾ ತೋರಿಸುತ್ತಿದ್ದಾರೆ. 50 ಶಾಸಕರನ್ನು ತೋರಿಸಿದರೆ ಇವತ್ತೇ ಡಿ. ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡೋಣ ಎಂದು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಅವರು ಸುದ್ದಿಗೋಷ್ಠಿ ನಡೆಸಿದ ವೇಳೆ ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಆಗುತ್ತದೆಯೇ? ಎಂಬ ಮಾಧ್ಯಮಗಳ ಪ್ರಶ್ನೆಗೆ ಈ ರೀತಿ ಅವರು ಉತ್ತರಿಸಿದರು. ಕರ್ನಾಟಕದಲ್ಲಿ ಆ ರೀತಿ ಆಗುವ ಪ್ರಶ್ನೆ ಬರಲ್ಲ. ನಂಬರ್ ಗೇಮ್​ನಲ್ಲಿ ಬಹಳಷ್ಟು ವ್ಯತ್ಯಾಸ ಇದೆ ಎಂದಿದ್ದಾರೆ.

ಕಾಂಗ್ರೆಸ್ ಯಾರನ್ನೂ ಬೇಕಾದರೂ ಸಿಎಂ ಮಾಡಲಿ. ನಾವು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ. ಇವತ್ತಿನ ಸಂಘರ್ಷದಲ್ಲಿ ಬಿಜೆಪಿ ತಟಸ್ಥವಾಗಿ ಉಳಿಯಬೇಕು. ಕಾಂಗ್ರೆಸ್ ನಾಯಕರು ಬೇಕಾದರೆ ಕಚ್ಚಾಡಲಿ, ಬಡಿದಾಡಲಿ. ಅವರ ಹೊಲಸು ನಮ್ಮ ಮೈ ಮೇಲೆ ಹಾಕಿಕೊಳ್ಳಬಾರದು. ಪೂರ್ಣ ಪ್ರಮಾಣದ ಸರ್ಕಾರ ಅಧಿಕಾರಕ್ಕೆ ತರಲು ಚುನಾವಣೆಗೆ ಹೋಗುವುದು ಒಳ್ಳೆಯದು ಎಂದ ಅವರು, ಒಂದು ವೇಳೆ ಡಿ. ಕೆ. ಶಿವಕುಮಾರ್ ಬಿಜೆಪಿಗೆ ಬಂದರೆ ನಾನು ಒಪ್ಪಲ್ಲ, ಜೀವನದಲ್ಲಿ ಡಿಕೆಶಿಯನ್ನು ನಾನು ಒಪ್ಪುವ ಪ್ರಶ್ನೆಯೇ ಇಲ್ಲ. ಆ ಸಂದರ್ಭ ಸೃಷ್ಟಿ ಆದರೆ, ಆಗ ದೇವರು ಏನು ಬುದ್ಧಿ ಕೊಡುತ್ತಾನೋ ನೋಡೋಣ ಎಂದಿದ್ದಾರೆ.

ಡಿಕೆಶಿಯನ್ನು ನಾವು ಒಪ್ಪುವುದಿಲ್ಲವೋ, ವಿಜಯೇಂದ್ರನನ್ನು ಅದೇ ರೀತಿ ಒಪ್ಪಲ್ಲ; ರಾಜ್ಯ ಬಿಜೆಪಿಯಲ್ಲಿ ಡಿಸೆಂಬರ್ ತಿಂಗಳಲ್ಲಿ ಕ್ರಾಂತಿ ಆಗುತ್ತಾ? ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ. ನಾವು ಏನು ಹೇಳಬೇಕೋ ಅದನ್ನು ಪಕ್ಷದ ಚೌಕಟ್ಟಿನಲ್ಲಿ ಹೇಳಿದ್ದೇವೆ. ಹೇಗೆ ಡಿಕೆಶಿಯನ್ನು ನಾವು ಒಪ್ಪುವುದಿಲ್ಲವೋ, ವಿಜಯೇಂದ್ರನನ್ನು ಅದೇ ರೀತಿ ಒಪ್ಪಲ್ಲ ಎನ್ನುವ ಮೂಲಕ ಡಿಕೆಶಿ, ವಿಜಯೇಂದ್ರ ವಿರುದ್ಧ ಹೋರಾಟ ಮುಂದುವರಿಯುತ್ತದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ.

ದೇವೇಗೌಡರ ಮಾತಿಗೆ ನಾನು ಕೌಂಟರ್​ ಕೊಡಲ್ಲ: ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನ ಆಗಲು ಸಿದ್ದರಾಮಯ್ಯ ಕಾರಣ. ಈಗಲೂ ಸಿದ್ದರಾಮಯ್ಯ ಅವರಿಂದಲೇ ಸರ್ಕಾರ ಉರುಳುತ್ತದೆ ಎಂದು ದೇವೇಗೌಡರು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದೇವೇಗೌಡರು ಹಿರಿಯ ನಾಯಕರು, ಪ್ರಧಾನಮಂತ್ರಿ ಆಗಿದ್ದವರು. ಅವರ ಮಾತಿಗೆ ನಾನು ಕೌಂಟರ್ ಕೊಡಲು ಆಗುವುದಿಲ್ಲ. ಯಾವ ದೃಷ್ಟಿಕೋನದಿಂದ ದೇವೇಗೌಡರು ಹೇಳಿದ್ದಾರೋ ಗೊತ್ತಿಲ್ಲ, ಸಮ್ಮಿಶ್ರ ಸರ್ಕಾರ ಪತನ ಆಗಲು ಮೂಲ ಕಾರಣ ಡಿ. ಕೆ. ಶಿವಕುಮಾರ್. ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಿದ್ದರಿಂದ ನಾನೇ ಮುಂಚೂಣಿಯಲ್ಲಿ ನಿಂತು ಸರ್ಕಾರ ಕೆಡವಿದೆ. ನನ್ನ ಜೊತೆಗೆ ಮಿತ್ರ ಮಂಡಳಿ ಕೂಡ ಇತ್ತು, ಈಗ ಏನಾಗುತ್ತೋ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದುಃಖದಿಂದ ಸುದ್ದಿಗೋಷ್ಠಿ ಮಾಡುತ್ತಿದ್ದೇನೆ. ಕಾಂಗ್ರೆಸ್ ಸರ್ಕಾರದ ಧೋರಣೆಯಿಂದ ಮನನೊಂದು ಮಾತನಾಡುತ್ತಿದ್ದೇನೆ. ಅ.19 ರಂದು ಡಿಸಿಸಿ ಬ್ಯಾಂಕ್ ಚುನಾವಣೆ ದಿನ ರಮೇಶ್ ಕತ್ತಿ ಅವರು ವಾಲ್ಮೀಕಿ ಸಮಾಜದ ಬಗ್ಗೆ ಬಹಳ ಕೆಟ್ಟದಾಗಿ ಮಾತನಾಡಿದ್ದರು. ಇದು ರಾಜ್ಯಾದ್ಯಂತ ಚರ್ಚೆ ಆಗಿತ್ತು. ಆ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುದಿಲ್ಲ. ಆ ವಿಚಾರದಲ್ಲಿ ಕಾನೂನು ಹೋರಾಟ ನಡೆಯುತ್ತಿದೆ. ಅದು ಮುಂದೆ ಏನಾಗುತ್ತದೆ ಎಂಬುದು ನನಗೆ ಗೊತ್ತಿಲ್ಲ. ಆದರೆ, ದುರ್ದೈವದ ಸಂಗತಿ ಎಂದರೆ ಎರಡ್ಮೂರು ದಿನಗಳ ಹಿಂದೆ ಇದೇ ಪ್ರಕರಣ ಸಂಬಂಧ ಹುಕ್ಕೇರಿ ಗ್ರೇಡ್- 2 ತಹಶೀಲ್ದಾರರು ವಾಲ್ಮೀಕಿ ಸಮಾಜ ಎಸ್ಟಿಗೆ ಬರಲ್ಲ ಎಂದು ನ್ಯಾಯಾಲಯಕ್ಕೆ ಬರೆದುಕೊಟ್ಟಿದ್ದಾರೆ. ಇದು ದೊಡ್ಡ ದುರಂತ. ಇದನ್ನು ರಮೇಶ್​ ಕತ್ತಿ ಮಾಡಿಸಿದ್ದಾರೋ, ಇಲ್ಲವೋ ಎನ್ನುವುದು ನನಗೆ ಗೊತ್ತಿಲ್ಲ. ಆದರೆ, ಅದನ್ನು ತನಿಖೆ ಮಾಡಬೇಕು. ತಕ್ಷಣ ಹುಕ್ಕೇರಿ ಗ್ರೇಡ್-2 ತಹಶೀಲ್ದಾರ್ ಅಮಾನತು ಮಾಡಿ, ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ