ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ನಟೋರಿಯಸ್ ಕೇರಳಿಯನ್ ಗ್ಯಾಂಗ್ ಮತ್ತೆ ಆಕ್ಟಿವ್ ಆದಂತೆ ಕಾಣುತ್ತಿದ್ದು, ಆಭರಣ ತಯಾರಕನ ಕಾರು ಅಡ್ಡಗಟ್ಟಿ ಕೆಜಿಗಟ್ಟಲೇ ಚಿನ್ನ ದರೋಡೆ ಮಾಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಮೂಲೆಹೊಳೆ ಚೆಕ್ ಪೋಸ್ಟ್ ಸಮೀಪ ಕಳೆದ ನ.20 ರಂದು ನಡೆದಿದ್ದು, ಇಂದು ದೂರು ದಾಖಲಾಗಿದೆ.
ಕೇರಳ ರಾಜ್ಯದ ಕ್ಯಾಲಿಕಟ್ ನಿವಾಸಿಯಾದ ಆಭರಣ ತಯಾರಕ ವಿನು(49) ಎರಡು ದಿನಗಳ ಬಳಿಕ ಗುಂಡ್ಲುಪೇಟೆ ಠಾಣೆಗೆ ಬಂದು ದೂರು ಕೊಟ್ಟಿದ್ದಾರೆ. ಮಂಡ್ಯದ ರಾಜೇಶ್ ಜ್ಯುವೆಲರ್ಸ್ ಎಂಬುವರಿಂದ ಆಭರಣ ತಯಾರಿಕೆಗಾಗಿ 800 ಗ್ರಾಂ 24 ಕ್ಯಾರೆಟ್ ಚಿನ್ನದ ಗಟ್ಟಿ ಹಾಗೂ 518 ಗ್ರಾಂ 22 ಕ್ಯಾರೆಟ್ ಚಿನ್ನವನ್ನು ಬಂಡೀಪುರದ ಮೂಲೆಹೊಳೆ ಮೂಲಕ ತರುತ್ತಿದ್ದಾಗ ಎರಡು ಇನ್ನೋವಾ ಹಾಗೂ ಒಂದು ಇಟಿಯೋಸ್ ವಾಹನದಲ್ಲಿ ಬಂದ ದರೋಡೆಕೋರರು ಮೊಬೈಲ್ ನೆಟ್ವರ್ಕ್ ಸಿಗದ ಸ್ಥಳದಲ್ಲಿ ಕಾರನ್ನು ಅಡ್ಡಗಟ್ಟಿ ಕಾರು ಸಮೇತ ಅಪಹರಿಸಿದ್ದಾರೆ.
ಮೈಸೂರಿನ ವಿರಾಜಪೇಟೆಯ ರಸ್ತೆಯ ಜನನಿಬಿಡ ರಸ್ತೆಯಲ್ಲಿ ಆಭರಣ ತಯಾರಕನ ಕಾರು ನಿಲ್ಲಿಸಿ ಚಿನ್ನ ಕದ್ದೊಯ್ದು ಪರಾರಿಯಾಗಿದ್ದು, 10-12 ಮಂದಿ ಇದ್ದರು ಎಂದು ವಿನು ತಿಳಿಸಿದ್ದಾರೆ. ಚಿನ್ನವನ್ನು ತರುವಾಗ ಚಾಲಕ ಸಮೀರ್ ಹಾಗೂ ವಿನು ಮಾತ್ರ ಇದ್ದರು ಎಂದು ದೂರಿನಲ್ಲಿದೆ.
ಸ್ಥಳಕ್ಕೆ ಎಸ್ಪಿ ಭೇಟಿ: ದೂರು ದಾಖಲಾಗುತ್ತಿದ್ದಂತೆ ಚಾಮರಾಜನಗರ ಎಸ್ಪಿ ಡಾ.ಬಿ.ಟಿ.ಕವಿತಾ ಮೂಲೆಹೊಳೆ ಚೆಕ್ ಪೋಸ್ಟ್ಗೆ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬಳಿಕ ಗುಂಡ್ಲುಪೇಟೆ ಠಾಣೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಆಭರಣ ತಯಾರಕ ವಿನು ಚಿನ್ನದ ಬಗ್ಗೆ ಕೆಲವು ದಾಖಲೆಗಳನ್ನು ಸಲ್ಲಿಸಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಪೂರ್ವನಿಯೋಜಿತವಾಗಿ ಸಂಚು ರೂಪಿಸಿ ಚಿನ್ನ ಪಡೆಯುವ ಹಾಗೂ ಚಿನ್ನ ಸಾಗಾಟದ ಎಲ್ಲಾ ಮಾರ್ಗದ ಮಾಹಿತಿಯನ್ನು ಪಡೆದು ಪ್ಲಾನ್ ಮಾಡಿ ಕೃತ್ಯ ಎಸಗಿದ್ದಾರೆ. ಈ ಹಿಂದಿನ ದರೋಡೆ ಪ್ರಕರಣ ಗಮನಿಸಿದರೇ ಕೇರಳದ ದರೋಡೆ ಗ್ಯಾಂಗ್ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
Laxmi News 24×7