ಹಾಸನ/ಶಿವಮೊಗ್ಗ: ಕಾರು, ಖಾಸಗಿ ಬಸ್ ಮತ್ತು ಸ್ಕೂಟರ್ ನಡುವೆ ಅಪಘಾತ ನಡೆದು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಳೆದ ಭಾನುವಾರ ರಾತ್ರಿ ನಡೆದಿದೆ. ಮಸಕನಳ್ಳಿ ಗ್ರಾಮದ ಎಂ.ಸಿ.ದೇವರಾಜ್ (54) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಹಾಸನ ಕಡೆಯಿಂದ ಬೆಂಗಳೂರು ಕಡೆ ಚಲಿಸುತ್ತಿದ್ದ ಖಾಸಗಿ ಬಸ್ ಅತಿ ವೇಗವಾಗಿ ಬಂದು ಕಾರಿಗೆ ಡಿಕ್ಕಿ ಹೊಡೆದು ನಂತರ ಸರ್ವಿಸ್ ರಸ್ತೆ ಕಡೆಗೆ ನುಗ್ಗಿ ಸ್ಕೂಟರ್ಗೆ ಗುದ್ದಿ ಬಳಿಕ ಪಲ್ಟಿಯಾಗಿದೆ. ಬಸ್ನಲ್ಲಿ ಚಾಲಕ ಮತ್ತು ನಿರ್ವಾಹಕರು ಹೊರತುಪಡಿಸಿ, ಯಾವುದೇ ಪ್ರಯಾಣಿಕರು ಇರಲಿಲ್ಲ ಎನ್ನಲಾಗಿದೆ.
ದ್ವಿಚಕ್ರ ವಾಹನ ಚಾಲಕ ದೇವರಾಜ್ ಮೃತಪಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಸರ್ವಿಸ್ ರಸ್ತೆಯ ಮೂಲಕ ತಮ್ಮ ಊರಿಗೆ ಹಿಂತಿರುಗವಾಗ ಬಸ್ ಡಿಕ್ಕಿ ಹೊಡೆದು ಇವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬಸ್ ಚಾಲಕ ಮತ್ತು ನಿರ್ವಾಹಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕಾರು ನಜ್ಜುಗುಜ್ಜು: ವೇಗವಾಗಿ ಬಂದು ಬಸ್ ಡಿಕ್ಕಿ ಹೊಡೆದಿದ್ದರಿಂದ ಕಾರು ನಜ್ಜುಗುಜ್ಜಾಗಿದೆ.
ಟ್ರಾಫಿಕ್ ಜಾಮ್: ಭಾನುವಾರ ರಾತ್ರಿ ವೇಳೆ ಅಪಘಾತ ಸಂಭವಿಸಿದ್ದರಿಂದ ಹಾಸನದಿಂದ ಬೆಂಗಳೂರು ಕಡೆಗೆ ಸಂಚರಿಸುವ ವಾಹನಗಳಿಗೆ ಟ್ರಾಫಿಕ್ ಬಿಸಿ ತಟ್ಟಿತ್ತು. ಕಿಲೋಮೀಟರ್ ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸ್ಥಳಕ್ಕೆ ಎಸ್ಐ ರೂಪ ಬಿರಾದರ್ ಮತ್ತು ಪೊಲೀಸರು ಆಗಮಿಸಿ ರಸ್ತೆ ಸಂಚಾರವನ್ನು ಸುಗಮಗೊಳಿಸಿದರು. ಅಪಘಾತ ಸಂಬಂದ ಚನ್ನರಾಯಪಟ್ಟಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಟಿ ಬಸ್ ಚಾಲಕನ ಯಡವಟ್ಟು ಚಾಲನೆ: ಓರ್ವ ಸಾವು, ಮೂವರಿಗೆ ಗಾಯ, ಹಲವು ಬೈಕ್ ಜಖಂ
ಶಿವಮೊಗ್ಗ ಸಿಟಿ ಬಸ್ ಚಾಲಕನ ಯಡವಟ್ಟಿನಿಂದ ಓರ್ವ ಸಾವನ್ನಪ್ಪಿ, ಮೂವರು ಗಾಯಗೊಂಡಿರುವ ಘಟನೆ ಭಾನುವಾರ ರಾತ್ರಿ ಶಿವಮೊಗ್ಗದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಡೆದಿದೆ.
ವೃತ್ತದ ಬಳಿಯ ಪ್ಲೈಓವರ್ ಬ್ರಿಡ್ಜ್ ಕಾಮಗಾರಿ ನಡೆಸಲಾಗುತ್ತಿತ್ತು. ಇದಕ್ಕಾಗಿ ಭಾರಿ ವಾಹನಗಳಿಗೆ ಈ ಭಾಗದಲ್ಲಿ ಸಂಚಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ. ಫ್ಲೈ ಓವರ್ ಮೇಲೆ ಭಾರಿ ವಾಹನಗಳು ಓಡಾಡಬಾರದೆಂದು ಮಣ್ಣಿನ ದಿಬ್ಬ ಮಾಡಲಾಗಿದೆ. ಆದರೂ ಚಾಲಕ ಮಣ್ಣಿನ ದಿಬ್ಬದ ಮೇಲೆ ಬಂದು ಸಿಟಿ ಬಸ್ ಚಲಿಸಿದ್ದಾನೆ. ಇದರಿಂದ ಬಸ್ ನಿಯಂತ್ರಣ ಕಳೆದುಕೊಂಡು ದ್ವಿಚಕ್ರ ವಾಹನ ಸವಾರ ಅಹಮದ್(31) ಎಂಬಾನಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಈತ ಗಂಭೀರ ಗಾಯಗೊಂಡಿದ್ದನು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಈತ ಬದುಕಲಿಲ್ಲ.
Laxmi News 24×7