ಬೆಳಗಾವಿ: ಈತ ಖತರ್ನಾಕ್ ಕಳ್ಳ. ಬಾಲಿವುಡ್ ನಟನ ಸಿನಿಮಾ ಕಳ್ಳತನಕ್ಕೆ ಪ್ರೇರಣೆಯಂತೆ. ಕದ್ದ ದುಡ್ಡಲ್ಲಿ ಕಾರು, ಬೈಕ್ ಖರೀದಿಸಿ ಶೋಕಿ ಮಾಡುವುದೇ ಈತನ ಖಯಾಲಿ. ಪೊಲೀಸರಿಗೆ ಚಳ್ಳೆಹಣ್ಣು ತೋರಿಸಿ ಓಡಾಡುತ್ತಿದ್ದ ಈತ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಆರೋಪಿಯ ಹೆಸರು ಸುರೇಶ ನಾಯಿಕ. ಬೆಳಗಾವಿಯ ಮಹಾಂತೇಶ ನಗರ ನಿವಾಸಿ.
ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ವಿಶ್ವನಾಥ ದುಗ್ಗಾಣಿ ಎಂಬವರ ಮನೆಯಲ್ಲಿ, ಅಕ್ಟೋಬರ್ 18 ಹಾಗೂ 22ರ ಮಧ್ಯೆ ಮನೆಗಳ್ಳತನ ನಡೆದಿತ್ತು. ಅಪಾರ ಪ್ರಮಾಣದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಹಾಗೂ ನಗದು ದೋಚಲಾಗಿತ್ತು. ಈ ಕುರಿತು ದೂರು ದಾಖಲಿಸಿಕೊಂಡಿದ್ದ ಯಮಕನಮರಡಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದರು.
ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು 89 ಲಕ್ಷ 60 ಸಾವಿರ ರೂ. ಮೌಲ್ಯದ 128 ತೊಲ (1280 ಗ್ರಾಂ) ಚಿನ್ನಾಭರಣ, 5 ಲಕ್ಷ 95 ಸಾವಿರ ರೂ. ಮೌಲ್ಯದ 8.5 ಕಿಲೋ ಬೆಳ್ಳಿ ಆಭರಣ ಹಾಗೂ 1 ಲಕ್ಷ 25 ಸಾವಿರ ರೂ. ನಗದನ್ನು ವಶಕ್ಕೆ ಪಡೆದಿದ್ದಾರೆ.
ಇವುಗಳ ಜೊತೆಗೆ, ವಿವಿಧ ಪ್ರಕರಣಗಳಲ್ಲಿ ಕಳ್ಳತನ ಮಾಡಿದ್ದ ಹಣದಲ್ಲಿ ಖರೀದಿಸಿದ್ದ ಒಂದು ಥಾರ್ ವಾಹನ, 2 ಬೈಕ್ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾತನಾಡಿ, “ದೀಪಾವಳಿ ಸಂದರ್ಭದಲ್ಲಿ ದೊಡ್ಡ ಕಳ್ಳತನ ಆಗಿತ್ತು. ನಾಲ್ಕು ತಂಡಗಳನ್ನು ರಚಿಸಿ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದೆವು. ಥಾರ್ ವಾಹನದಲ್ಲಿ ಕೊಲ್ಹಾಪುರಕ್ಕೆ ಹೋಗುತ್ತಿದ್ದ ವೇಳೆ ಕಳ್ಳನನ್ನು ಬೆನ್ನತ್ತಿ ಹಿಡಿಯುವಲ್ಲಿ ನಮ್ಮ ಪೊಲೀಸರು ಯಶಸ್ವಿಯಾಗಿದ್ದಾರೆ. ಆ ಮನೆಯಲ್ಲಿ ಕಳ್ಳತನ ಆಗಿದ್ದ ಎಲ್ಲವೂ ಜಪ್ತಿ ಆಗಿದೆ” ಎಂದು ತಿಳಿಸಿದರು.
Laxmi News 24×7