ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಆನ್‍ಲೈನ್ ಮೂಲಕ ಸ್ವಯಂ ಘೋಷಣೆ ಸಲ್ಲಿಸುವ ಅವಧಿಯನ್ನು ನವೆಂಬರ್ 30ರವರೆಗೆ ವಿಸ್ತರಿಸಿದೆ.
ಕರ್ನಾಟಕ ರಾಜ್ಯದಲ್ಲಿರುವ ಎಲ್ಲ ಜನರ ಹಿಂದುಳಿದ ವರ್ಗಗಳು, ಇತರೆ ಜಾತಿಗಳು ಅನುಸೂಚಿತ ಜಾತಿ ಮತ್ತು ಪಂಗಡಗಳು ಸೇರಿದಂತೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಂಡಿದ್ದು, ವಿವಿಧ ಕಾರಣಗಳಿಂದಾಗಿ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವವರಿಗೆ ಅವಕಾಶ ನೀಡುವ ಹಿನ್ನೆಲೆಯಲ್ಲಿ ಆನ್‍ಲೈನ್ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಅವಧಿಯನ್ನು 2025ರ ನವೆಂಬರ್ 10ರ ವರೆಗೆ ವಿಸ್ತರಿಸಲಾಗಿತ್ತು.
ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಸಮೀಕ್ಷೆ ಪ್ರಗತಿ ಕಾಣದ ಕಾರಣ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಅವಕಾಶ ನೀಡುವ ದೃಷ್ಟಿಯಿಂದ ಆನ್‍ಲೈನ್ ಲಿಂಕ್ https://kscbcselfdeclaration.karnataka.gov.in ಮೂಲಕ ಸ್ವಯಂ ಪಾಲ್ಗೊಳ್ಳುವ ಅವಧಿಯನ್ನು ಅಂತಿಮವಾಗಿ ನವೆಂಬರ್ 30ರ ವರೆಗೆ ವಿಸ್ತರಿಸಲಾಗಿದೆ. ಸಮೀಕ್ಷೆಯಲ್ಲಿ ಇದುವರೆಗೂ ಪಾಲ್ಗೊಳ್ಳದೇ ಇರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಆಯೋಗ ಕೋರಿದೆ.
ರಾಜ್ಯದಲ್ಲಿ ಸಮೀಕ್ಷೆ ಅಂತ್ಯ: ಸೆಪ್ಟೆಂಬರ್ 22ರಿಂದ ಕೈಗೊಂಡಿದ್ದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಅಕ್ಟೋಬರ್ 31ಕ್ಕೆ ಮುಕ್ತಾಯಗೊಂಡಿತ್ತು. ಸಮೀಕ್ಷೆಯಲ್ಲಿ 6,13,83,908 ಮಂದಿ ಭಾಗವಹಿಸಿ ಮಾಹಿತಿ ನೀಡಿದ್ಧಾರೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ತಿಳಿಸಿತ್ತು.
ಸೆಪ್ಟೆಂಬರ್ 22ರಿಂದ ಅಕ್ಟೋಬರ್ 31ರ ಅಂತ್ಯಕ್ಕೆ ರಾಜ್ಯದಲ್ಲಿ 6,68,38,000 ಜನರ ಪೈಕಿ 6,13,83,908 ಮಂದಿಯ ಸಮೀಕ್ಷೆ ನಡೆಸಲಾಗಿದೆ. 4,22,258 ಮಂದಿ ಸಮೀಕ್ಷೆಗೆ ನಿರಾಕರಿಸಿದ್ಧಾರೆ. ಸಮೀಕ್ಷೆದಾರರು ನಿವಾಸಗಳಿಗೆ ಭೇಟಿ ಸಂದರ್ಭದಲ್ಲಿ 34,49,681 ಮನೆಗಳು ಬಾಗಿಲು ಹಾಕಿರುವುದು ಅಥವಾ ಜನರು ಮನೆಯಲ್ಲಿ ಇಲ್ಲದಿರುವುದು ಕಂಡುಬಂದಿದೆ ಎಂದು ಆಯೋಗ ಮಾಹಿತಿ ನೀಡಿದೆ.
Laxmi News 24×7