Breaking News

2019ನೇ ಸಾಲಿನ ಡಾ. ರಾಜ್ ಕುಮಾರ್ ಪ್ರಶಸ್ತಿಗೆ ಉಮಾಶ್ರೀ ಭಾಜನ: ಪುಟ್ಟಣ್ಣ ಕಣಗಾಲ್, ವಿಷ್ಣುವರ್ಧನ್ ಪ್ರಶಸ್ತಿ ಪ್ರಕಟ

Spread the love

ಬೆಂಗಳೂರು: 2019ನೇ ಸಾಲಿನ ಡಾ. ರಾಜ್ ಕುಮಾರ್ ಪ್ರಶಸ್ತಿ, ಪುಟ್ಟಣ್ಣ ಕಣಗಾಲ್ ಹಾಗೂ ಡಾ. ವಿಷ್ಣುವರ್ಧನ್ ಪ್ರಶಸ್ತಿ ಸೇರಿದಂತೆ ಚಲನಚಿತ್ರ ಸಾಹಿತ್ಯ ವಾರ್ಷಿಕ ಹಾಗೂ ಕಿರುಚಿತ್ರ ಪ್ರಶಸ್ತಿಗಳಿಗೆ ಅರ್ಹರನ್ನು ರಾಜ್ಯ ಸರ್ಕಾರ ಘೋಷಿಸಿದೆ.

ಡಾ. ರಾಜ್ ಕುಮಾರ್ ಪ್ರಶಸ್ತಿಗೆ ಹಿರಿಯ ನಟಿ ಉಮಾಶ್ರೀ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ನಿರ್ದೇಶಕ ಎನ್. ಆರ್. ನಂಜುಂಡೇಗೌಡ ಹಾಗೂ ಡಾ. ವಿಷ್ಣುವರ್ಧನ್ ಪ್ರಶಸ್ತಿಗೆ ನಿರ್ಮಾಪಕ ಹಾಗೂ ನಿರ್ದೇಶಕರಾಗಿರುವ ರಿಚರ್ಡ್ ಕ್ಯಾಸ್ಟಲಿನೋ ಅವರು ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಪ್ರಶಸ್ತಿ ಪುರಸ್ಕೃತರಿಗೆ 5 ಲಕ್ಷ ರೂ. ನಗದು, 50 ಗ್ರಾಂ ಚಿನ್ನದ ಪದಕ ಸಿಗಲಿದೆ ಎಂದು ಆದೇಶದಲ್ಲಿ ಸರ್ಕಾರ ತಿಳಿಸಿದೆ.

2019ನೇ ಸಾಲಿನ ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿಗೆ ಬೆಳ್ಳಿತೆರೆ – ಸಿನಿಮಾ ಪ್ರಬಂಧಗಳು, ಪುಸ್ತಕದ ಲೇಖಕ ರಘುನಾಥ ಚ.ಹ. ಹಾಗೂ ಅಂಕಿತ ಪುಸ್ತಕ ಪ್ರಕಾಶರಾದ ಪ್ರಕಾಶ್ ಕಂಬತ್ತಳ್ಳಿ ಅವರು ಭಾಜನರಾಗಿದ್ದಾರೆ.

ಇವರಿಗೆ ತಲಾ 20 ಸಾವಿರ ನಗದು ಹಾಗೂ 50 ಗ್ರಾಂ ಬೆಳ್ಳಿ ಪದಕ ದೊರೆಯಲಿದೆ. ಗುಳೆ ಕಿರುಚಿತ್ರಕ್ಕೆ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ಬಂದಿದೆ. ನಿರ್ಮಾಪಕ ಮನೋಹರ್ ಹಾಗೂ ನಿರ್ದೇಶಕ ಶ್ರೀನಾಥ್ ಎಸ್. ಹಡಗಲಿ ಅವರು 50 ಗ್ರಾಂ ಬೆಳ್ಳಿ ಪದಕ ಹಾಗೂ 25 ಸಾವಿರ ನಗದು ಪ್ರಶಸ್ತಿ ಪಡೆಯಲಿದ್ದಾರೆ ಎಂದು ವಾರ್ತಾ ಇಲಾಖೆ ತಿಳಿಸಿದೆ.

ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾದವರ ಕಿರು ಪರಿಚಯ : ಉಮಾಶ್ರೀ : ಉಮಾಶ್ರೀ ಕನ್ನಡ ರಂಗಭೂಮಿ ಮತ್ತು ಚಿತ್ರರಂಗದ ಒಬ್ಬ ಪ್ರತಿಭಾವಂತ ನಟಿ, ನಿರ್ದೇಶಕಿ ಮತ್ತು ರಾಜಕಾರಣಿಯಾಗಿದ್ದಾರೆ. ಬಾಲ್ಯದಲ್ಲಿಯೇ ರಂಗಭೂಮಿಯಲ್ಲಿ ಅಭಿನಯವನ್ನು ಪ್ರಾರಂಭಿಸಿದ ಇವರು 1980ರ ದಶಕದಲ್ಲಿ “ಅನುಭವ” ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಅಭಿನಯದಲ್ಲಿ ಹಾಸ್ಯ ಸೇರಿದಂತೆ ಭಾವನಾತ್ಮಕ ಮತ್ತು ಗಂಭೀರ ಪಾತ್ರಗಳಲ್ಲಿ ಅವರ ಬಹುಮುಖ ಪ್ರತಿಭೆ ಎದ್ದು ಕಾಣುತ್ತದೆ. ಒಟ್ಟಾರೆಯಾಗಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಉಮಾಶ್ರೀ, ಕನ್ನಡ ಚಿತ್ರರಂಗದ ಒಂದು ದಂತ ಕತೆಯಾಗಿದ್ದಾರೆ.

ಉಮಾಶ್ರೀ ಅವರು ಎರಡು ಬಾರಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. “ಗುಲಾಬಿ ಟಾಕೀಸ್” ಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ ಸಹ ಪಡೆದಿದ್ದಾರೆ. ಕಲೆಯ ಮೂಲಕ ಜನಮಾನಸ ಗೆದ್ದು ರಾಜಕೀಯದಲ್ಲಿ ಸಹ ತೊಡಗಿಸಿಕೊಂಡಿರುವ ಅವರು 2013 ರಿಂದ 2018 ರವರೆಗೆ ಶಾಸಕರಾಗಿ, ಕರ್ನಾಟಕದ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರಸ್ತುತ ಕರ್ನಾಟಕ ವಿಧಾನ ಪರಿಷತ್ ಸದಸ್ಯೆಯಾಗಿದ್ದರೂ ಸಹ ರಂಗಭೂಮಿ, ಕಿರುತೆರೆ ಮತ್ತು ಸಿನಿಮಾಗಳಲ್ಲಿ ಸಕ್ರಿಯವಾಗಿ ನಟಿಸುತ್ತಿರುವ ಅವರು ಸರಳತೆ, ಸಾಮಾಜಿಕ ಕಳಕಳಿ ಮತ್ತು ಕಲಾತ್ಮಕ ಸಾಧನೆಗಾಗಿ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಇವರ ಜೀವಮಾನ ಸಾಧನೆಗಾಗಿ 2019ನೇ ಸಾಲಿನ ‘ಡಾ. ರಾಜ್ ಕುಮಾರ್ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ