ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂಬ ಆರೋಪದಲ್ಲಿ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನಾ ಅವರನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಅವಹೇಳನಕಾರಿ ಪದಗಳಿಂದ ನಿಂದಿಸಿದ ಆರೋಪದಲ್ಲಿ ಬಂಧನಕ್ಕೆ ಗುರಿಯಾಗಿದ್ದ ಆರು ಮಂದಿ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮತ್ತು ಒಬ್ಬರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಬಂಧಿತರಾದ ಕೆ. ಪ್ರಮೋದ್, ಮಂಜುನಾಥ್, ಸಿ.ವೈ.ರಾಜೇಶ್, ಟಿ.ಓಬಣ್ಣ, ಕೆ.ಎಂ.ಗಂಗಾಧರ್, ಚಿನ್ಮಯ್ ಶೆಟ್ಟಿ ಜಾಮೀನು ಕೋರಿ ಮತ್ತೊಬ್ಬ ಆರೋಪಿ ಬಿ.ಎ.ವಿಕಾಸ್ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿದ ನಡೆಸಿದ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣನವರ್ ಅವರಿದ್ದ ನ್ಯಾಯಪೀಠ, ಪ್ರಕರಣ ಸಂಬಂಧ ತನಿಖಾಧಿಕಾರಿಗಳು ಈಗಾಗಲೇ ಆರೋಪ ಪಟ್ಟಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಹೀಗಾಗಿ ಷರತ್ತುಬದ್ಧ ಜಾಮೀನು ಮಂಜೂರು ಮಾಡುತ್ತಿರುವುದಾಗಿ ತಿಳಿಸಿದೆ.
ಅಲ್ಲದೇ, ಎಲ್ಲ ಆರೋಪಿಗಳು ಇನ್ಸ್ಟಾಗ್ರಾಮ್ನಲ್ಲಿ ಖಾತೆಗಳನ್ನು ಹೊಂದಿದ್ದು, ದೂರುದಾರರಾದ ರಮ್ಯಾ ಅವರಿಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಈ ಆರೋಪಗಳಿಗೆ ಏಳು ವರ್ಷಗಳಿಗೂ ಕಡಿಮೆ ಅವಧಿಯ ಶಿಕ್ಷೆ ವಿಧಿಸಬಹುದಾಗಿದೆ. ಸೆಕ್ಷನ್ 75(1)(5) ಮಾತ್ರದಲ್ಲಿ ಜಾಮೀನು ರಹಿತವಾಗಿದ್ದು, ಕೇವಲ ಒಂದು ವರ್ಷ ಮಾತ್ರ ಶಿಕ್ಷೆ ವಿಧಿಸಬಹುದಾಗಿದೆ. ಅಲ್ಲದೇ, ಎಲ್ಲ ಆರೋಪಿಗಳ ಫೋನ್ಗಳನ್ನು ತನಿಖಾಧಿಕಾರಿಗಳು ಪಡೆದುಕೊಂಡಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಆದ್ದರಿಂದ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿರಿಸಿಕೊಂಡು ವಿಚಾರಣೆ ನಡೆಸಬೇಕಾದ ಅಗತ್ಯತೆ ಎದುರಾಗುವುದಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣ ಆನ್ಲೈನ್ ಮೂಲಕ ನಡೆದಿರುವುದಾಗಿದ್ದು, ಸಾಕ್ಷ್ಯಗಳ ನಾಶದ ಪ್ರಶ್ನೆ ಎದುರಾಗುವುದಿಲ್ಲ. ತನಿಖಾಧಿಕಾರಿಗಳು ಪ್ರಕರಣ ಸಂಬಂಧ ಹೆಚ್ಚುವರಿ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ. ಜತೆಗೆ, ಎಲ್ಲ ಆರೋಪಿಗಳು 18 ರಿಂದ 25 ವರ್ಷದ ಒಳಗಿನವರಾಗಿದ್ದು, ಜಾಮೀನು ಮತ್ತು ನಿರೀಕ್ಷಣಾ ಜಾಮೀನು ನೀಡಬಹುದಾಗಿದೆ ಎಂದು ಪೀಠ ಆದೇಶದಲ್ಲಿ ಹೇಳಿದೆ.
Laxmi News 24×7