ಬೆಳಗಾವಿ: ಈ ಬಾರಿ ಬೆಳಗಾವಿ ಡಿಸಿಸಿ ಬ್ಯಾಂಕ್ ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಜಾರಕಿಹೊಳಿ ಸಹೋದರರು ಪಣ ತೊಟ್ಟಿದ್ದಾರೆ. ಈ ಗುರಿ ಸಾಧಿಸಲು ಕೆಲ ತಾಲ್ಲೂಕುಗಳಲ್ಲಿ ಎದುರು-ಬದುರು ತಮ್ಮದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಯಾರೇ ಗೆದ್ದರೂ ತಮಗೇ ಪ್ಲಸ್ ಆಗಬೇಕು ಎಂಬ ಲೆಕ್ಕಾಚಾರ ಈ ಸಹೋದರರದ್ದು ಎಂದು ಜಿಲ್ಲೆಯ ಜನ ಮಾತನಾಡಿಕೊಳ್ಳುತ್ತಿದ್ದಾರೆ.
![]()
ಅದು ವಿಧಾನಸಭೆ, ಲೋಕಸಭೆ ಚುನಾವಣೆ ಇರಲಿ. ಸಹಕಾರ ರಂಗದ ಸಣ್ಣ ಸೊಸೈಟಿ ಚುನಾವಣೆಯೇ ಇರಲಿ. ಬೆಳಗಾವಿಯಲ್ಲಿ ಚುನಾವಣೆ ನಡೆಯುತ್ತಿದೆ ಎಂದರೆ ರಾಜ್ಯದ ಜನರ ಚಿತ್ತ ಬೆಳಗಾವಿಯತ್ತ ನೆಟ್ಟಿರುತ್ತದೆ. ಅಷ್ಟೊಂದು ಸಲೀಸಾಗಿ ಇಲ್ಲಿ ಚುನಾವಣೆ ಮುಗಿಯೋದಿಲ್ಲ.
ಇತ್ತಿಚೆಗಷ್ಟೇ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಕತ್ತಿ ಮತ್ತು ಜಾರಕಿಹೊಳಿ ಕುಟುಂಬಗಳ ರಾಜಕೀಯ ಕಾದಾಟವೇ ಇದಕ್ಕೆ ಸಾಕ್ಷಿ. ಅದು ಮುಗಿಯುತ್ತಲೇ ಡಿಸಿಸಿ ಬ್ಯಾಂಕ್ ಬ್ಯಾಟಲ್ ಶುರುವಾಗಿದೆ. ಹೇಗಾದರೂ ಮಾಡಿ ಬ್ಯಾಂಕಿನಲ್ಲಿ ಮಾಜಿ ಅಧ್ಯಕ್ಷ ರಮೇಶ್ ಕತ್ತಿ ಅವರ ಹಿಡಿತ ತಪ್ಪಿಸಬೇಕು ಮತ್ತು ಹುಕ್ಕೇರಿ ಸೋಲಿನ ಸೇಡು ತೀರಿಸಿಕೊಳ್ಳಲು ಜಾರಕಿಹೊಳಿ ಬ್ರದರ್ಸ್ ತಂತ್ರ ಹೆಣೆದಿದ್ದಾರೆ.
ಕೆಲ ತಾಲ್ಲೂಕುಗಳಲ್ಲಿ ಜಾರಕಿಹೊಳಿ ಸಹೋದರರ ಆಪ್ತರೇ ಸ್ಪರ್ಧಿ-ಪ್ರತಿಸ್ಪರ್ಧಿಗಳಾಗಿದ್ದಾರೆ. ಕಿತ್ತೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅಲ್ಲಿನ ಶಾಸಕ ಬಾಬಾಸಾಹೇಬ ಪಾಟೀಲ್ ಸಹೋದರ ನಾನಾಸಾಹೇಬ ಪಾಟೀಲ್ ಅವರನ್ನು ತಮ್ಮ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದ್ದರೆ, ಶಾಸಕ ಬಾಲಚಂದ್ರ ಜಾರಕಿಹೊಳಿ ಮಾಜಿ ಸಚಿವ ದಿ.ಡಿ.ಬಿ.ಇನಾಮದಾರ ಪುತ್ರ ವಿಕ್ರಮ್ ಇನಾಮದಾರ ಅವರನ್ನು ಚುನಾವಣೆಗೆ ನಿಲ್ಲಿಸಿದ್ದಾರೆ.![]()
ಇದರ ಜೊತೆಗೆ ನಿಪ್ಪಾಣಿಯಲ್ಲೂ ಇದೇ ತಂತ್ರ ಅನುಸರಿಸಿದ್ದು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಬಾಲಚಂದ್ರ ಜಾರಕಿಹೊಳಿ ಅವರ ಅಭ್ಯರ್ಥಿ ಆದರೆ, ಉತ್ತಮ ಪಾಟೀಲ ಸತೀಶ್ ಜಾರಕಿಹೊಳಿ ಅವರ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದಾರೆ. ಹೀಗೆ ಕಿತ್ತೂರು ಮತ್ತು ನಿಪ್ಪಾಣಿಯಲ್ಲಿ ಯಾರು ಗೆದ್ದರೂ ಜಾರಕಿಹೊಳಿ ಸಹೋದರರ ಬಣಕ್ಕೆ ಆ ಅಭ್ಯರ್ಥಿ ಸೇರಬೇಕು. ವಿರೋಧಿ ಬಣಕ್ಕೆ ಯಾವುದೇ ಕಾರಣಕ್ಕೂ ಸೀಟ್ ಹೋಗಬಾರದು ಎಂಬುದು ಮಾಸ್ಟರ್ ಪ್ಲಾನ್!
ಇನ್ನು ಬಾಲಚಂದ್ರ ಜಾರಕಿಹೊಳಿ ಅಥಣಿ, ಕಾಗವಾಡದಲ್ಲಿ ನಾವು ಅಭ್ಯರ್ಥಿ ಹಾಕುವುದಿಲ್ಲ ಎಂದಿದ್ದಾರೆ. ಹಾಗಾಗಿ, ಶಾಸಕ ಲಕ್ಷ್ಮಣ ಸವದಿ ವಿರುದ್ಧ ಮಾಜಿ ಶಾಸಕ ಮಹೇಶ ಕುಮಠಳ್ಳಿ, ಶಾಸಕ ರಾಜು ಕಾಗೆ ವಿರುದ್ಧ ಮಾಜಿ ಸಚಿವ ಶ್ರೀಮಂತ ಪಾಟೀಲ್ ಸುಪುತ್ರ ಶ್ರೀನಿವಾಸ ಪಾಟೀಲ್ ಅವರನ್ನು ಶಾಸಕ ರಮೇಶ್ ಜಾರಕಿಹೊಳಿ ನಿಲ್ಲಿಸಿದ್ದಾರೆ. ಹೀಗೆ ಜಾರಕಿಹೊಳಿ ಸಹೋದರರ ಭಿನ್ನ, ವಿಭಿನ್ನ ನಡೆ ಕುತೂಹಲ ಮೂಡಿಸಿದೆ.
ನಿನ್ನೆ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ 7 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಅದರಲ್ಲಿ ಅಣ್ಣಾಸಾಹೇಬ ಜೊಲ್ಲೆ, ವಿಕ್ರಮ್ ಇನಾಮದಾರ ಕೂಡ ನಾಮಪತ್ರ ಸಲ್ಲಿಸಿದ್ದಾರೆ. ಈ ಇಬ್ಬರು ಬಾಲಚಂದ್ರ ಪೆನಲ್ನಲ್ಲಿ ಗುರುತಿಸಿಕೊಂಡಿದ್ದರೆ, ನಿಪ್ಪಾಣಿಯಿಂದ ಅಣ್ಣಾಸಾಹೇಬ ಜೊಲ್ಲೆ ವಿರುದ್ಧ ಸತೀಶ್ ಜಾರಕಿಹೊಳಿ ಅವರ ಬಲದ ಮೇಲೆ ಉತ್ತಮ ಪಾಟೀಲ್ ಕಣಕ್ಕೆ ಇಳಿದಿದ್ದಾರೆ. ಇನ್ನು ಕಿತ್ತೂರಿನಲ್ಲಿ ಸತೀಶ್ ಜಾರಕಿಹೊಳಿ ಅವರೇ ಅಭ್ಯರ್ಥಿಯಾಗಿ ಘೋಷಿಸಿರುವ ಬಾಬಾಸಾಹೇಬ ಪಾಟೀಲ್ ಸಹೋದರ ನಾನಾಸಾಹೇಬ ಪಾಟೀಲ್ ಸಹ ವಿಕ್ರಮ್ ಇನಾಮದಾರ್ ವಿರುದ್ಧ ಸ್ಪರ್ಧಿಸಿದ್ದಾರೆ.
ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಬಾಬಾಸಾಹೇಬ ಪಾಟೀಲ, “ಸತೀಶ ಜಾರಕಿಹೊಳಿ ಅವರ ಬೆಂಬಲ ನಮಗಿದೆ. ಅವರೇ ಸ್ಪರ್ಧಿಸುವಂತೆ ಸೂಚಿಸಿದ್ದರು. ಹಾಗಾಗಿ, ಸ್ಪರ್ಧಿಸಿದ್ದು, ತಾಲ್ಲೂಕಿನ ರೈತರ ಕಲ್ಯಾಣವೇ ನಮ್ಮ ಗುರಿ. ಪಿಕೆಪಿಎಸ್ಗಳಿಗೆ ಸಾಲ ವಿತರಣೆಯಲ್ಲಿ ಸಾಕಷ್ಟು ತಾರತಮ್ಯ ಉಂಟಾಗುತ್ತಿತ್ತು. ಅದನ್ನು ಹೋಗಲಾಡಿಸಿ, ರೈತರಿಗೆ ಅನುಕೂಲ ಮಾಡಿಕೊಡಲಾಗುವುದು. ಪಿಕೆಪಿಎಸ್ ಸದಸ್ಯರು, ರೈತರ ಆಶೀರ್ವಾದ ಮತ್ತು ಸತೀಶ್ ಜಾರಕಿಹೊಳಿ ಅವರ ಸಹಕಾರದಿಂದ ನಮ್ಮ ಗೆಲುವು ನಿಶ್ಚಿತ” ಎಂದಿದ್ದಾರೆ.
ಇನ್ನು ಉತ್ತಮ್ ಪಾಟೀಲ್ ಮಾತನಾಡಿ, “ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಚುನಾವಣೆಗೆ ಸ್ಪರ್ಧಿಸಲು ಅವರ ಒಪ್ಪಿಗೆ ಪಡೆದು ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ನಮ್ಮ ತಂದೆಯವರು ಸುಮಾರು 50 ವರ್ಷಗಳ ಕಾಲ ಸಹಕಾರ ರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಅದು ನನ್ನ ಕೈ ಹಿಡಿಯಲಿದೆ” ಎನ್ನುತ್ತಲೇ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಜಾರಕಿಹೊಳಿ ಸಹೋದರರ ಬೆಂಬಲ ಯಾವ ಅಭ್ಯರ್ಥಿಗೆ ಇರುತ್ತದೆ ಎಂಬುದು ಈಗ ಯಕ್ಷಪ್ರಶ್ನೆ ಆಗಿ ಕಾಡುತ್ತಿರುವುದು ಮಾತ್ರ ಸುಳ್ಳಲ್ಲ.
Laxmi News 24×7