ವಿಜಯಪುರ: ಕಳ್ಳರು ಚಾಪೆ ಕೆಳಗೆ ನುಗ್ಗಿದರೆ ಪೊಲೀಸರು ರಂಗೋಲಿ ಕೆಳಗೆ ನುಗ್ಗುವ ಮೂಲಕ ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿದ್ದ ಎಸ್ಬಿಐ ಬ್ಯಾಂಕ್ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಭರ್ಜರಿ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಹೆಡೆಮುರಿ ಕಟ್ಟುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸೆ.16ರಂದು ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ನಡೆದಿದ್ದ ಎಸ್ಬಿಐ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರೋಡೆಕೋರರು ಬಳಸಿದ್ದ ಒಂದು ಕಾರು ಒಂದು ಬೈಕ್ ಹಾಗೂ ಒಟ್ಟು 9.01 ಕೆಜಿ ಚಿನ್ನಾಭರಣ ಹಾಗೂ 86,31,220 ರೂ. ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ದರೋಡೆ ಪ್ರಕರಣಕ್ಕೆ ಬಂದೂಕು ಪೂರೈಸಿದ್ದ ಹಾಗೂ ಕೃತ್ಯಕ್ಕೆ ಸಹಕರಿಸಿದ್ದ ಬಿಹಾರ ಮೂಲದ ರಾಕೇಶ್ ಕುಮಾರ್ ಸಹಾನಿ, ರಾಜಕುಮಾರ್ ಪಾಸ್ವಾನ ಹಾಗೂ ರಕ್ಷಕ್ ಕುಮಾರ್ ಮ್ಯಾತೋ ಎಂಬುವರನ್ನು ಹೆಡೆಮುರಿ ಕಟ್ಟುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಅವರು, “ಜಿಲ್ಲೆಯಲ್ಲಿ ನಡೆದಿದ್ದ ಎಸ್ಬಿಐ ಬ್ಯಾಂಕ್ ಕಳ್ಳತನ ಹಾಗೂ ದರೋಡೆ ಪ್ರಕರಣ ಭೇದಿಸುವಲ್ಲಿ ವಿಜಯಪುರ ಪೊಲೀಸರು ಮುನ್ನಡೆ ಸಾಧಿಸಿದ್ದಾರೆ. ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿದ್ದ ಮನಗೂಳಿಯ ಕೆನರಾ ಬ್ಯಾಂಕ್ ಕಳ್ಳತನ ಹಾಗೂ ಚಡಚಣದ ಎಸ್ಬಿಐ ಬ್ಯಾಂಕ್ ದರೋಡೆ ಪ್ರಕರಣವನ್ನು ವಿಜಯಪುರ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾಗಶಃ ತನಿಖೆ ಮುಕ್ತಾಯವಾಗಿದ್ದು, ಇನ್ನುಳಿದ ತನಿಖೆ ಮುಂದುವರೆದಿದೆ. ಉತ್ತಮ ಕರ್ತವ್ಯ ನಿರ್ವಹಿಸಿ ಎರಡೂ ಪ್ರಕರಣಗಳನ್ನು ಭೇದಿಸಿದ ಪೊಲೀಸ್ ಸಿಬ್ಬಂದಿ ಕಾರ್ಯ ಶ್ಲಾಘನೀಯ. ಬ್ಯಾಂಕ್ ಸಿಬ್ಬಂದಿ ಕೂಡ ಕಳ್ಳತನ ಮತ್ತು ದರೋಡೆಗಳು ನಡೆಯದಂತೆ ಮುಂಜಾಗ್ರತೆಯಾಗಿ ಆರ್ಬಿಐ ನಿಯಮಗಳನ್ನು ಪಾಲಿಸುವ ಅಗತ್ಯವಿದೆ” ಎಂದರು.
Laxmi News 24×7