ಉಡುಪಿ: ಶಾಲಾ, ಕಾಲೇಜುಗಳ ಬಸ್‌ಗಳಿಗೆ ನಕಲಿ ವಿಮಾ ಪಾಲಿಸಿ ಮಾಡಿ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಪ್ರಕರಣ ಭೇದಿಸಿರುವ ಪೊಲೀಸರು, ಇಬ್ಬರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಸಾಸ್ತಾನ ಕುಂಜಿಕೆರೆ ರಸ್ತೆಯ ರಾಕೇಶ ಎಸ್ (33) ಮತ್ತು ಶಿರಸಿಯ ಚರಣ ಬಾಬು ಮೇಸ್ತ ಬಂಧಿತರು.
2024ರ ನ.25ರಂದು ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಹೊಂಬಾಡಿ-ಮಂಡಾಡಿ ಗ್ರಾಮದ ಹುಣ್ಸೆಮಕ್ಕಿ ಎಂಬಲ್ಲಿ ಶಾಲಾ ವಾಹನವೊಂದು ರಿಕ್ಷಾಗೆ ಡಿಕ್ಕಿ ಹೊಡೆದ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಕುಂದಾಪುರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ರಿಕ್ಷಾದ ಚಾಲಕ ವಿಮಾ ಪರಿಹಾರವಾಗಿ 15,95,000 ರೂ. ಹಣ ನೀಡಬೇಕೆಂದು ಮನವಿ ಮಾಡಿದ್ದರು.
ವಿಮಾ ಕಂಪನಿಯವರು ಪರಿಶೀಲಿಸಿದಾಗ ಶಾಲಾ ಬಸ್ಸಿನ ವಿಮಾ ಪಾಲಿಸಿಯು ನಕಲಿ ಆಗಿರುವುದು ಕಂಡುಬಂದಿದೆ. ನಕಲಿ ವಿಮಾ ಪಾಲಿಸಿಯನ್ನು ಸೃಷ್ಟಿಸಿ, ಅದನ್ನು ಠಾಣೆಗೆ ಹಾಗೂ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಮಾ ಕಂಪನಿಗೆ ಮೋಸ ಮಾಡಿರುವುದಾಗಿ ರಿಲಯನ್ಸ್ ಜನರಲ್ ಇನ್ಯೂರೆನ್ಸ್ ಕಂಪನಿಯ ಮ್ಯಾನೇಜರ್ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಶೇಷ ತಂಡ ತನಿಖೆ ನಡೆಸಿದಾಗ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಶಾಲಾ, ಕಾಲೇಜು ಬಸ್‌ಗಳೇ ಟಾರ್ಗೆಟ್: ತನಿಖಾ ತಂಡ ಸೆ.6ರಂದು ಪ್ರಕರಣದ ಆರೋಪಿ ರಾಕೇಶ್‌ನನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ರಿಲಯನ್ಸ್ ಜನರಲ್ ಇನ್ಯೂರೆನ್ಸ್ ಕಂಪನಿಯಲ್ಲಿ ಎಸ್‌ಡಿಒ ಆಗಿದ್ದ ಚರಣ ಬಾಬು ಮೇಸ್ತನ ಜೊತೆ ಸೇರಿಕೊಂಡು ಕುಂದಾಪುರ, ಕೋಟ, ಬ್ರಹ್ಮಾವರ, ಶಿರೂರು, ಭಟ್ಕಳಗಳಲ್ಲಿನ ಶಾಲೆ ಹಾಗೂ ಕಾಲೇಜಿನ ಬಸ್ಸಿಗೆ ವಿಮೆ ಪಾಲಿಸಿ ಮಾಡುವುದಾಗಿ ನಂಬಿಸಿ ನಕಲಿ ವಿಮೆ ಪಾಲಿಸಿ ಮಾಡಿ ಮೋಸ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಚರಣ ಬಾಬು ಮೇಸ್ತನನ್ನು ಪೊಲೀಸರು ಅ.3ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ತನಿಖೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರೋಪಿಗಳು ಭಟ್ಕಳ ಹಾಗೂ ಉಡುಪಿ ಕಡೆಯ ಖಾಸಗಿ/ಅನುದಾನಿತ ಶಾಲಾ ಕಾಲೇಜಿನಲ್ಲಿ ಶಾಲಾ ಬಸ್ಸಿನ ವಿಮೆ ಮಾಡಿಸುವುದಾಗಿ ಹಣ ಪಡೆದು ಇದೇ ರೀತಿಯ ಕೃತ್ಯವೆಸಗಿರುವುದು ತಿಳಿದು ಬಂದಿದೆ.
Laxmi News 24×7