ಚಿಕ್ಕಬಳ್ಳಾಪುರ: ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರ 75ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ನಾಳೆ ಜಿಲ್ಲೆಗೆ ಆಗಮಿಸುತ್ತಿದ್ದು, ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದೆ.
ಚಿಂತಾಮಣಿ ನಗರದ ಹೊರವಲಯದ ಚಿನ್ನಸಂದ್ರ ಸಮೀಪ ಕಾರ್ಯಕ್ರಮ ನಡೆಯಲಿದೆ. ಸುಮಾರು 30 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಆಯೋಜಕರೊಂದಿಗೆ ಕಳೆದ 10 ದಿನಗಳಿಂದ ನಿರಂತರ ಸಂಪರ್ಕದಲ್ಲಿದ್ದೇವೆ. ತಮಿಳುನಾಡು, ಬೆಂಗಳೂರಿನ ಕಾಲ್ತುಳಿತ ಘಟನೆಗಳಿಂದಾಗಿ ನಾವು ಹೆಚ್ಚು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಎಲ್ಲ ವ್ಯವಸ್ಥೆಗಳ ಬಗ್ಗೆ ವಿಶೇಷವಾಗಿ ಗಮನ ಹರಿಸುತ್ತಿದ್ದೇವೆ. ಬೆಸ್ಕಾಂ, ಅಗ್ನಿಶಾಮಕ ದಳ, ಲೋಕೋಪಯೋಗಿ ಇಲಾಖೆಯೊಂದಿಗೆ ಮಾತುಕತೆ ನಡೆಸಲಾಗಿದೆ. 30ರಿಂದ 40 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ವೇದಿಕೆಯಿಂದ ಒಂದು ಕಿ.ಮೀ. ದೂರದಲ್ಲಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ರಸ್ತೆ ಬದಿ ಪಾರ್ಕಿಂಗ್‌ಗೆ ಅವಕಾಶವಿಲ್ಲ. ಪಾರ್ಕಿಂಗ್ ಸ್ಥಳದಿಂದ ವೇದಿಕೆಗೆ ಬರಲು ದಾರಿ ಮಾಡಲಾಗಿದೆ. ಆಯೋಜಕರು ಪಾಸ್ ವಿತರಿಸಿದ್ದಾರೆ. ವಿಐಪಿ, ಸಾಮಾನ್ಯ ಪಾಸ್ಗಳ ವಿತರಣೆ ಆಗಿದೆ. ಜನರು ಯಾವುದೇ ಸೈನ್ ಬೋರ್ಡ್, ಗುಟ್ಕಾ ತಂಬಾಕು ತರುವುದನ್ನು ನಿಷೇಧಿಸಲಾಗಿದೆ” ಎಂದು ಮಾಹಿತಿ ನೀಡಿದರು.
“ಬಂದೋಬಸ್ತ್‌ಗಾಗಿ 500 ಪೊಲೀಸ್ ಸಿಬ್ಬಂದಿ, 6 ಡಿವೈಎಸ್ಪಿ, 13 ಪೊಲೀಸ್ ಇನ್ಸ್ಪೆಕ್ಟರ್, 60 ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳನ್ನು ನಿಯೋಜಿಸಲಾಗಿದೆ. ನಾಲ್ಕು ಕೆಎಸ್ಆರ್ಪಿ ತುಕಡಿಗಳು, 6 ಡಿಆರ್ ತುಕಡಿಗಳು ಮತ್ತು 3 ಅಗ್ನಿಶಾಮಕ ದಳ ಹಾಗು 4 ಆ್ಯಂಬುಲೆನ್ಸ್ಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ” ಎಂದು ಎಸ್ಪಿ ತಿಳಿಸಿದರು.
Laxmi News 24×7