ಚಿಕ್ಕೋಡಿ (ಬೆಳಗಾವಿ): ರೈತರ ಬಗ್ಗೆ ಕಾಳಜಿ ಇರೋದ್ರಿಂದ ತಡರಾತ್ರಿವರೆಗೆ ನಾವು ಇಲ್ಲಿ ಬೆಳೆ ಹಾನಿಯ ಬಗ್ಗೆ ವೀಕ್ಷಣೆ ಮಾಡುತ್ತಿದ್ದೇವೆ, ಆದರೆ ಸಿದ್ದರಾಮಯ್ಯನವರು ಮನೆಯಲ್ಲಿ ಆರಾಮಾಗಿ ನಿದ್ದೆ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದರು.
ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಅತಿವೃಷ್ಟಿಯಿಂದ ಹಾಳಾದ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ವೇಳೆಚಿಕ್ಕೋಡಿ ಪ್ರತಿನಿಧಿ ಶಿವರಾಜ್ ನೇಸರಗಿ ಜೊತೆ ಮಾತನಾಡಿದ ಅವರು, ನಾವು ಬೀದಿ ಬೀದಿ ಸುತ್ತುತ್ತಿದ್ದೇವೆ, ಬಿಜೆಪಿಗೆ ಜನರ ಬಗ್ಗೆ ಮತ್ತು ರೈತರ ಬಗ್ಗೆ ಕಾಳಜಿ ಇರೋದ್ರಿಂದ ಜನರ ಸಂಕಷ್ಟ ಆಲಿಸುತ್ತಿದ್ದೇವೆ. ಆದರೆ ಸಿಎಂ ಸಿದ್ದರಾಮಯ್ಯ ಮನೆಯಲ್ಲಿ ಆರಾಮಾಗಿದ್ದು, ರೈತರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಈ ಮುಖ್ಯಮಂತ್ರಿಗೆ ರೈತರ ಬಗ್ಗೆ ಒಂಚೂರು ಕಾಳಜಿ ಇಲ್ಲ, ಹೀಗಾಗಿ ರೈತರ ಸಂಕಷ್ಟ ಆಲಿಸುತ್ತಿಲ್ಲ. ಉತ್ತರ ಕರ್ನಾಟಕದಲ್ಲಿ ಕಳೆದ ಎರಡು ತಿಂಗಳಿನಿಂದ ನಿರಂತರ ಮಳೆಯಿಂದ ಅತಿವೃಷ್ಟಿ ಸಂಭವಿಸಿದೆ. ಲಕ್ಷಾಂತರ ಹೆಕ್ಟೇರ್ನಲ್ಲಿ ಬೆಳೆ ಹಾನಿಯಾಗಿದೆ. ಬಿಜೆಪಿಗೆ ರೈತರ ಬಗ್ಗೆ ಕಾಳಜಿ ಇರೋದ್ರಿಂದ ಸರ್ಕಾರದ ಕಣ್ಣು ತೆರೆಸುವ ಕಾರ್ಯವನ್ನು ನಾವು ಮಾಡುತ್ತಿದ್ದೇವೆ ಎಂದರು.
ತುರ್ತಾಗಿ ಸಿಎಂ ಸಿದ್ದರಾಮಯ್ಯ ಅವರು ಹಾನಿ ಸಂಭವಿಸಿದ ಸ್ಥಳಗಳಿಗೆ ಭೇಟಿಕೊಟ್ಟು ಆದಷ್ಟು ಬೇಗನೆ ಅವರಿಗೆ ಪರಿಹಾರದ ಹಣವನ್ನು ನೀಡಬೇಕು. ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದರಿಂದ ಯಾರೂ ಕೂಡ ರೈತರ ಬಗ್ಗೆ ಕಾಳಜಿ ತೋರುವುದಿಲ್ಲ. ಮುಖ್ಯಮಂತ್ರಿಯನ್ನು ಕೆಳಗಿಳಿಸುವುದು, ಏರಿಸುವ ಸಂಬಂಧ ಜಗಳ ಪ್ರಾರಂಭವಾಗಿದ್ರಿಂದ ಶಾಸಕರು ರೈತರ ಬಗ್ಗೆ ಕಾಳಜಿ ಹೊಂದಿಲ್ಲ. ಮುಖ್ಯಮಂತ್ರಿ ಇರುತ್ತಾರೆ ಎಂಬುದು ಕೂಡ ಗ್ಯಾರಂಟಿ ಇಲ್ಲ, ಇದರಿಂದ ಸ್ಥಳಕ್ಕೆ ಯಾರೂ ಬರ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಇವರ ಮಧ್ಯ ಸಿಲುಕಿ ರೈತರ ಪಾಡು ಹೀನಾಯ ಸ್ಥಿತಿಗೆ ತಲುಪಿದೆ. ತುರ್ತಾಗಿ ಸಿಎಂ ಎರಡು ಸಾವಿರ ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಬೇಕು. ರಾಜ್ಯ ಸರ್ಕಾರ ಕೇಂದ್ರಕ್ಕೆ ಹಣ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಬೇಕು. ಮನವಿ ಕೊಟ್ಟರೆ ಮಾತ್ರ ಕೇಂದ್ರ ಸರ್ಕಾರ ದುಡ್ಡು ಬಿಡುಗಡೆ ಮಾಡುತ್ತದೆ. ಇವರು ಕೇಂದ್ರ ಸರ್ಕಾರವನ್ನು ಬೈಯುತ್ತಾ ತಿರುಗಾಡಿದರೆ ಇವರಿಗೆ ಹಣವನ್ನು ಯಾರು ಕೊಡುತ್ತಾರೆ. ಕಳೆದ 60 ವರ್ಷಗಳಿಂದ ಕೇಂದ್ರಕ್ಕೆ ಮನವಿ ಸಲ್ಲಿಸಿದರೆ ಮಾತ್ರ ಹಣ ಬಿಡುಗಡೆ ಮಾಡುತ್ತಾ ಬಂದಿರುವ ಪದ್ಧತಿ ಇದೆ. ಮನವಿ ಕೊಡದೆ ಸ್ಪಂದನೆ ಮಾಡು ಅಂದ್ರೆ ಯಾರು ಕೊಡುತ್ತಾರೆ ಎಂದು ಅಶೋಕ್ ಪ್ರಶ್ನಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಅಂದಾಜು 52,000 ಹೆಕ್ಟೇರ್ನಲ್ಲಿ ಬೆಳೆ ಹಾನಿ ಸಂಭವಿಸಿದೆ. ತೋಟಗಾರಿಕೆ ಬೆಳೆ 8,000 ಹೆಕ್ಟೇರ್ನಲ್ಲಿ ಹಾನಿ ಸಂಭವಿಸಿದೆ. ಕೃಷ್ಣ ಮೇಲ್ದಂಡೆ ಯೋಜನೆಗೆ ಸರ್ಕಾರ ಪರಿಹಾರ ಅಷ್ಟೇ ಘೋಷಿಸಿದೆ. ರೈತರಿಗೆ ಯಾವಾಗ ಹಣ ಕೊಡುತ್ತೇವೆ ಎಂದು ತಿಳಿಸಿಲ್ಲ. ಈ ಸರ್ಕಾರ ಸಂಪೂರ್ಣ ಕೊಲ್ಯಾಪ್ಸ್ ಆಗಿದೆ. ರೈತರಿಗೆ ಕೊಡೋಕೆ ಇವರ ಬಳಿ ದುಡ್ಡಿಲ್ಲ, ಮುಂದಿನ ಸಲ ಬಿಜೆಪಿ ಸರ್ಕಾರ ಬರುತ್ತೆ, ನಾವು ರೈತರಿಗೆ ಹಣ ಬಿಡುಗಡೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
Laxmi News 24×7