ಸುಬ್ರಹ್ಮಣ್ಯ(ದ.ಕನ್ನಡ): ದಕ್ಷಿಣ ರೈಲ್ವೆ ವಲಯವು ಇದೇ ಅ.5ರಂದು ಮಂಗಳೂರು ಸೆಂಟ್ರಲ್‌ನಿಂದ ಹಾಸನ, ಯಶವಂತಪುರ, ಕಾಚಿಗುಡ ಮಾರ್ಗವಾಗಿ ಪ್ರಪ್ರಥಮವಾಗಿ ದೆಹಲಿಯ ಹಜ್ರತ್ ನಿಜಾಮುದ್ದೀನ್ ರೈಲು ನಿಲ್ದಾಣಕ್ಕೆ ವಿಶೇಷ ರೈಲು ಘೋಷಿಸಿದೆ.
ರೈಲು ಸಂಖ್ಯೆ 06008 ಮಂಗಳೂರು ಸೆಂಟ್ರಲ್ – ಹಜ್ರತ್ ನಿಜಾಮುದ್ದೀನ್ ವಿಶೇಷ ರೈಲು ಅ.5ರಂದು ಮಧ್ಯಾಹ್ನ 2:25ಕ್ಕೆ ಮಂಗಳೂರು ಸೆಂಟ್ರಲಿನಿಂದ ಹೊರಟು ಹಾಸನ ಮಾರ್ಗವಾಗಿ ರಾತ್ರಿ 11:30ಕ್ಕೆ ಯಶವಂತಪುರ ಜಂಕ್ಷನ್ ರೈಲು ನಿಲ್ದಾಣ ತಲುಪಲಿದೆ. ಅಲ್ಲಿಂದ ರಾತ್ರಿ 11:45ಕ್ಕೆ ಹೊರಡುವ ರೈಲು ಯಲಹಂಕ, ಹಿಂದುಪುರ, ಧರ್ಮಾವರಂ ಮಾರ್ಗವಾಗಿ ಮರುದಿನ ಅಂದರೆ ಅ.6ರಂದು ಬೆಳಗ್ಗೆ 10:30ಕ್ಕೆ ಹೈದರಾಬಾದ್‌ನ ಕಾಚಿಗುಡ ರೈಲು ನಿಲ್ದಾಣ ತಲುಪಲಿದೆ. ಅಲ್ಲಿಂದ ಬೆಳಗ್ಗೆ 10:40ಕ್ಕೆ ಹೊರಡುವ ರೈಲು ಕಾಜಿಪೇಟೆ, ಬಲ್ಹಾರ್ಶಾ, ಜಾಂನ್ಸಿ ಮಾರ್ಗವಾಗಿ ದಿನಾಂಕ ಅ.7ರಂದು ರಾತ್ರಿ 8 ಗಂಟೆಗೆ ಹಜ್ರತ್ ನಿಜಾಮುದ್ದೀನ್ ರೈಲು ನಿಲ್ದಾಣ ತಲುಪಲಿದೆ.

ಈ ರೈಲಿಗೆ ಮಂಗಳೂರು ಸೆಂಟ್ರಲ್ ಬಳಿಕ ಬಂಟ್ವಾಳ, ಕಬಕ, ಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ ಜಂಕ್ಷನ್, ಚನ್ನರಾಯಪಟ್ಟಣ, ಕುಣಿಗಲ್, ಯಶವಂತಪುರ ಜಂಕ್ಷನ್, ಯಲಹಂಕ ಜಂಕ್ಷನ್, ಹಿಂಡುಪುರ, ಧರ್ಮಾವರಂ ಜಂಕ್ಷನ್, ಅನಂತಪುರ, ಗೂಟಿ ಜಂಕ್ಷನ್, ಕುರ್ನೂಲ್ ಸಿಟಿ, ಮಹಬೂಬನಗರ್, ಕಾಚಿಗುಡ, ಕಾಜಿಪೇಟೆ ಜಂಕ್ಷನ್, ಬಲ್ಹಾರ್ಶಾ, ನಾಗಪುರ ಜಂಕ್ಷನ್, ಜುಹಾರ್ಪುರ, ಇಟಾರ್ಸಿ ಜಂಕ್ಷನ್, ಭೋಪಾಲ್ ಜಂಕ್ಷನ್, ಬಿನಾ ಜಂಕ್ಷನ್, ಜಾನ್ಸಿ ಜಂಕ್ಷನ್, ಗ್ವಾಲಿಯರ್ ಜಂಕ್ಷನ್, ಆಗ್ರಾ ಕಂಟೋನ್ಮೆಂಟ್, ಮಥುರಾ ಜಂಕ್ಷನ್, ಹಜ್ರತ್ ನಿಜಾಮುದ್ದೀನ್ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.
ಈ ರೈಲು ದಕ್ಷಿಣ ರೈಲ್ವೆ ವಲಯವು ಮಂಗಳೂರಿನಿಂದ ಕರ್ನಾಟಕ ಹಾಗೂ ಉತ್ತರ ಭಾರತದ ಕಡೆಗೆ ಹಾಸನ ಮಾರ್ಗವಾಗಿ ಚಲಿಸುವ ಪ್ರಥಮ ರೈಲು ಕೂಡಾ ಆಗಿದೆ. ಹಬ್ಬಗಳು ಹಾಗೂ ವಾರಾಂತ್ಯದ ರಜೆ ಮುಗಿಸಿ ಬೆಂಗಳೂರು, ಹೈದರಾಬಾದ್, ದೆಹಲಿ ಸೇರಿದಂತೆ ಉತ್ತರ ಭಾರತದ ವಿವಿಧ ಭಾಗಗಳಿಗೆ ಸಂಚರಿಸುವವರು ಈ ವಿಶೇಷ ರೈಲಿನ ಮೂಲಕ ಪ್ರಯಾಣಿಸಬಹುದು.

ಈ ಬಗ್ಗೆ ಪುತ್ತೂರು ರೈಲು ಪ್ರಯಾಣಿಕ ಶ್ರೀಕರ .ಬಿ. ಅವರು ಪ್ರತಿಕ್ರಿಯಿಸಿ, “ದಸರಾ ಹಬ್ಬ ಮುಗಿದ ಬಳಿಕ ಊರಿಗೆ ಬಂದವರು ಮರಳಿ ಬೆಂಗಳೂರು ಹಾಗೂ ನಾಡಿನ ಬೇರೆ ಬೇರೆ ಕಡೆಗಳಿಗೆ ಹೋಗುವ ಕಾರಣ ಅ.5ರಂದು ಬಸ್ ಹಾಗೂ ರೈಲುಗಳಿಗೆ ಬಹಳ ಬೇಡಿಕೆಯಿದೆ. ಇದನ್ನು ಮನಗಂಡ ಜಿಲ್ಲೆಯ ವಿವಿಧ ರೈಲ್ವೆ ಪ್ರಯಾಣಿಕರ ಹಿತರಕ್ಷಣ ಸಮಿತಿಗಳು ದಕ್ಷಿಣ ರೈಲ್ವೆ ವಲಯಕ್ಕೆ ಅ.5ರಂದು ಮಂಗಳೂರಿನಿಂದ ಬೆಂಗಳೂರಿಗೆ ವಿಶೇಷ ರೈಲು ಓಡಿಸಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ದಕ್ಷಿಣ ರೈಲ್ವೆ ವಲಯದ ಪಾಲಕ್ಕಾಡ್ ವಿಭಾಗದ ವಿಭಾಗೀಯ ಪ್ರಬಂಧಕರು ಹಾಗೂ ಮಂಗಳೂರಿನ ಹಿರಿಯ ಅಧಿಕಾರಿಗಳು ಮಂಗಳೂರು ಸೆಂಟ್ರಲಿನಿಂದ ಹಾಸನ, ಯಶವಂತಪುರ ಮಾರ್ಗವಾಗಿ ದೆಹಲಿಯ ಹಜ್ರತ್ ನಿಜಾಮುದ್ದೀನ್ ರೈಲು ನಿಲ್ದಾಣಕ್ಕೆ ವಿಶೇಷ ರೈಲು ಓಡಿಸಲಿದೆ. ಇದು ಬೆಂಗಳೂರಿಗೆ ಹೋಗುವವರಿಗೆ ಸಹಾಯ ಆಗುವುದು ಮಾತ್ರವಲ್ಲದೇ ದೇಶದ ಪ್ರಮುಖ ನಗರಗಳಾದ ಹೈದರಾಬಾದ್, ನಾಗಪುರ, ಭೋಪಾಲ್, ಜಾನ್ಸಿ, ಆಗ್ರಾ, ಶ್ರೀಕೃಷ್ಣ ಜನ್ಮಭೂಮಿ ಮಥುರ ಹಾಗು ರಾಷ್ಟ್ರ ರಾಜಧಾನಿ ದೆಹಲಿಗೆ ಹೋಗುವವರಿಗೂ ಸಹಾಯವಾಗಲಿದೆ. ಜೊತೆಗೆ ಹಲವು ಸಮಯದಿಂದ ಕೇಳಿ ಬರುತ್ತಿರುವ ನವಯುಗ ಎಕ್ಸ್‌ಪ್ರೆಸ್ ರೈಲಿನ ಪುನಾರಂಭಕ್ಕೆ ಇದು ಒಂದು ಮಹತ್ವದ ಹೆಜ್ಜೆ ಆಗಲಿದೆ. ಹೀಗಾಗಿ ಹಬ್ಬ ಹಾಗೂ ವಾರಾಂತ್ಯದ ಬಳಿಕ ಬೆಂಗಳೂರು ಹಾಗೂ ಇತರ ಕಡೆಗಳಿಗೆ ಹೋಗುವವರು ಈ ರೈಲು ಸೇವೆಯನ್ನು ಬಳಸಬಹುದು” ಎಂದು ಅವರು ತಿಳಿಸಿದರು.
Laxmi News 24×7