ಹುಬ್ಬಳ್ಳಿ : ಉತ್ತರ ಕರ್ನಾಟಕ ಭಾಗದಲ್ಲಿ ಶಕ್ತಿಪೀಠಗಳಿಗೇನು ಕಮ್ಮಿ ಇಲ್ಲ. ಸವದತ್ತಿ ಯಲ್ಲಮ್ಮ, ಹುಲಿಗಿಯ ಹುಲಿಗೆಮ್ಮ ದೇವಿಯಂತೆ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ‘ಗುಡಿಗೇರಿ ದ್ಯಾಮವ್ವ’ ದೇವಸ್ಥಾನ ಕೂಡ ಪ್ರಮುಖ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ.
ದಸರಾ ಸಂದರ್ಭದಲ್ಲಿ ರಾಜ್ಯ ಅಲ್ಲದೇ ಅನ್ಯ ರಾಜ್ಯದ ಭಕ್ತರೂ ದೇವಿಯ ದರ್ಶನ ಪಡೆದುಕೊಂಡು ಪುನೀತರಾಗುತ್ತಿದ್ದಾರೆ. ಗುಡಿಗೇರಿ ದ್ಯಾಮವ್ವ ದೇವಿಯ ಇತಿಹಾಸವು ಶಿಶುನಾಳ ಶರೀಫರ ಕಾಲದಿಂದಲೂ ಪ್ರಚಲಿತದಲ್ಲಿದೆ. ದ್ಯಾಮವ್ವ ದೇವಿ ‘ಶಕ್ತಿದೇವತೆ’ ಆಗಿದ್ದು, ಶರೀಫ ಸಾಹೇಬರ ಭಕ್ತಿಯ ಕೋರಿಕೆಯಂತೆ ದರ್ಶನ ನೀಡಿದ್ದರು ಎಂಬ ಪ್ರತೀತಿ ಇದೆ.
ಸಂತ ಶಿಶುನಾಳ ಷರೀಫರು ಹಾಗೂ ಅವರ ಗುರುಗಳಾದ ಗುರುಗೋವಿಂದ ಭಟ್ಟರು ದ್ಯಾಮವ್ವ ದೇವಸ್ಥಾನದಲ್ಲಿ ತಂಗಿದ್ದಾಗ ಹಣದ ಅಡಚಣೆಯಾಗುತ್ತದೆ. ಆಗ ತಾಯಿ ದ್ಯಾಮವ್ವ ದೇವಿ ಷರೀಫರಿಗೆ ದರ್ಶನ ನೀಡಿ ತನ್ನ ಮೂಗಿನಲ್ಲಿದ್ದ ಬಂಗಾರದ ಮೂಗುತಿ ಕೊಟ್ಟಿದ್ದರು ಎಂಬ ಕಥೆ ಇದೆ.
ಬೇಡಿದ್ದನ್ನು ಕರುಣಿಸುವ ತಾಯಿ ಎಂದು ಪ್ರಸಿದ್ಧಿ: ಅಂದಿನಿಂದ ಇಂದಿನವರೆಗೂ ದೇವಿಯ ಕುರಿತಾದ ಹಲವು ಪವಾಡಗಳು ಪ್ರಚಲಿತದಲ್ಲಿದ್ದು, ಬೇಡಿದವರಿಗೆ ಬೇಡಿದ್ದನ್ನು ಕರುಣಿಸುವ ಮಹಾತಾಯಿಯೆಂದು ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ. ದಸರಾ ಸಂದರ್ಭದಲ್ಲಿ ಈ ದೇವಿ ಸನ್ನಿಧಾನದಲ್ಲಿ ಹಲವು ಪೂಜಾ ಕಾರ್ಯಗಳು ನಡೆಯುತ್ತವೆ. ಚಂಡಿಕಾ ಯಾಗ ಮತ್ತು ದೀಪೋತ್ಸವ ಎಂಬ ಪ್ರಮುಖ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಗ್ರಾಮದ ಮಹಿಳೆಯರು ದಸರಾ ಸಂದರ್ಭದ ಒಂಬತ್ತು ದಿನ ಉಪವಾಸವಿದ್ದು, ದೇವಿಯನ್ನು ಪೂಜಿಸುವ ಪದ್ಧತಿ ಹಿಂದಿನಿಂದಲೂ ಚಾಲ್ತಿಯಲ್ಲಿದೆ.
Laxmi News 24×7