ಬೆಂಗಳೂರು: ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರು ಇಹಲೋಕ ತ್ಯಜಿಸಿದ್ದು, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೇರಿದಂತೆ ಗಣ್ಯರು ಎಸ್. ಎಲ್. ಭೈರಪ್ಪ ಅವರ ಅಂತಿಮ ದರ್ಶನ ಪಡೆದರು.
ಎಸ್. ಎಲ್. ಬೈರಪ್ಪನವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಸಾಹಿತ್ಯಾಸಕ್ತರು, ಅವರ ಅಭಿಮಾನಿಗಳು ಸೇರಿದಂತೆ ಸಾರ್ವಜನಿಕರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.
ಭೈರಪ್ಪನವರ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಮೈಸೂರಿನಲ್ಲೇ ಎಸ್. ಎಲ್. ಭೈರಪ್ಪ ಅವರ ಸ್ಮಾರಕ ಮಾಡಲು ನಮ್ಮ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ಬಿಜೆಪಿ ಹೇಳ್ತಾರೆ ಅಂತ ಮಾಡಲ್ಲ. ಭೈರಪ್ಪ ಅವರ ಕರ್ಮ ಕ್ಷೇತ್ರದಲ್ಲೇ ಸ್ಮಾರಕ ಮಾಡುತ್ತೇವೆ. ಅನೇಕ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಇದ್ದರೂ ಕೂಡ, ಅದು ಬೇರೆ ಬೇರೆ. ಅವರ ಸಾಹಿತ್ಯ, ಜ್ಞಾನಕ್ಕಾಗಿ ಸ್ಮಾರಕ ಮಾಡುತ್ತೇವೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಸಂಸ್ಕಾರ ನೆರವೇರುತ್ತದೆ” ಎಂದು ತಿಳಿಸಿದರು.
“ಎಸ್.ಎಲ್. ಭೈರಪ್ಪ ಅವರ ನಿಧನದಿಂದ ಸಾರಸ್ವತ ಲೋಕ ಬಡವಾಗಿದೆ. ಅವರು ಸುಮಾರು 25 ಕಾದಂಬರಿ ಬರೆದಿದ್ದಾರೆ. ಮೈಸೂರಲ್ಲಿ ಹೆಚ್ಚು ಕಾಲ ಇದ್ರು. ಹೈಸ್ಕೂಲ್ – ಎಂಎವರೆಗೆ ಮೈಸೂರಲ್ಲಿ ವಿದ್ಯಾಭ್ಯಾಸ ಮಾಡಿದ್ರು. ಅವರ ಕಾದಂಬರಿಗಳು 40 ಭಾಷೆಗಳಿಗೆ ತರ್ಜುಮೆ ಆಗಿವೆ. ಅವರದ್ದು ಒಬ್ಬರದ್ಜೇ ಆ ಕೀರ್ತಿ. ನಾವು ಪಟ್ನಾದಲ್ಲಿದ್ದಾಗ ವಿಶ್ವೇಶ್ವರ್ ಭಟ್ಟರು ಫೋನ್ ಮಾಡಿ, ಭೈರಪ್ಪ ಅವರು ನಿಧನರಾಗಿರುವ ಕುರಿತು ತಿಳಿಸಿದರು” ಎಂದು ಹೇಳಿದರು.
ಬಹಳ ಕಷ್ಟಪಟ್ಟು ಮೇಲೆ ಬಂದ ಅವರು ಬಹಳ ಓದುಗರನ್ನು ಸಂಪಾದನೆ ಮಾಡಿದ್ದರು. ಅವರ ವಿಷಯ ಫಿಲಾಸಫಿ. ಆಶ್ಚರ್ಯ ಏನಂದ್ರೆ ಬೋಧನೆ ಮಾಡುತ್ತಲೇ ಸಾಹಿತ್ಯ ಕೃಷಿ ಮಾಡಿದರು. ಕಾದಂಬರಿ ಬರೆಯೋದು ತಮ್ಮ ಆತ್ಮತೃಪ್ತಿಗಾಗಿ ಅಂತ ಹೇಳ್ತಿದ್ದರು. ಅವರ ಬದುಕಿನ ಅನುಭವದ ಮೇಲೆ ಕಾದಂಬರಿ ಬರೆಯೋರು. ಎಸ್.ಎಲ್. ಭೈರಪ್ಪ ಅವರಿಗೆ ಜ್ಞಾನಪೀಠ ಸಿಗಬೇಕಿತ್ತು. ಹಾಗಂತ ಅವರಿಗೆ ಆ ಬಗ್ಗೆ ಏನೂ ಬೇಸರ ಇರಲಿಲ್ಲ ಎಂದರು.
Laxmi News 24×7