ಬೆಂಗಳೂರು: “ಬಿಜೆಪಿಯವರೇ ಮತಗಳ್ಳತನ ಮಾಡುತ್ತಿದ್ದಾರೆ. ನನ್ನ ಬಳಿ ಅಧಿಕೃತ ದಾಖಲೆಗಳಿವೆ” ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ಆಳಂದ ಮತ ಕ್ಷೇತ್ರದಲ್ಲಿ ಮತಗಳವು ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, “2023ರ ಚುನಾವಣೆಗೂ ಮುನ್ನ 7,250 ಮತದಾರರ ಹೆಸರು ಏಕಾಏಕಿ ಮತದಾರರಿಗೆ ಗೊತ್ತಿಲ್ಲದೆ ಡಿಲೀಟ್ ಆಗ್ತಿತ್ತು. ಅದರ ಬಗ್ಗೆ ಶಾಸಕ ಬಿ.ಆರ್.ಪಾಟೀಲ್ ಮತ್ತು ನಾನು ಎಲೆಕ್ಷನ್ ಕಮಿಷನ್ಗೆ ದೂರು ಕೊಟ್ಟಿದ್ದೆವು. ಅದರ ಆಧಾರದ ಮೇಲೆ ಕಲಬುರಗಿಯಲ್ಲಿ ಎಫ್ಐಆರ್ ದಾಖಲಿಸಲಾಯಿತು. ಪರಿಶೀಲನೆ ಮಾಡಿದಾಗ 6018 ಮತದಾರರಲ್ಲಿ ಯಾರ್ಯಾರು ಅರ್ಜಿ ಹಾಕಿದ್ರು, ಅದರಲ್ಲಿ 28 ಜನಕ್ಕೆ ಮಾತ್ರ ಮಾಹಿತಿ ಇತ್ತು. ಉಳಿದ ಅರ್ಜಿದಾರರಿಗೆ ಯಾವುದೇ ಮಾಹಿತಿಯೇ ಇರಲಿಲ್ಲ” ಎಂದು ತಿಳಿಸಿದರು.
“ಹತ್ತಾರು ಮೊಬೈಲ್‌ನಿಂದ ಅರ್ಜಿಗಳನ್ನು ಹಾಕಿದ್ದಾರೆ. ನನ್ನ ವೋಟ್ ಡಿಲೀಟ್ ಆಗಬೇಕು ಅಂತ ನನಗೆ ಗೊತ್ತಿಲ್ದೇ ಮತ್ತೊಬ್ಬರು ಅರ್ಜಿ ಹಾಕಿದ್ದಾರೆ. ಪರಿಶೀಲನೆ ನಡೆದಾಗ ಮೊಬೈಲ್ ನಂಬರ್‌ಗಳು ಮಧ್ಯ ಪ್ರದೇಶ, ಬಿಹಾರ, ಗುಜರಾತ್ನಲ್ಲಿ ಪತ್ತೆಯಾಗಿತ್ತು. ಸಿಐಡಿ ಅವರು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದರು. ಮೊಬೈಲ್ ನಂಬರ್ ಐಪಿ ಅಡ್ರೆಸ್ ಎಲ್ಲೆಲ್ಲಿದೆ ಅನ್ನುವ ಮಾಹಿತಿ ಕೇಳಿದರು. ಎಲೆಕ್ಷನ್ ಕಮಿಷನ್ ಅವರು ಹೇಗೆ ಲಾಗಿನ್ ಕೊಟ್ಟರು?. ಎಲ್ಲ ಟೆಕ್ನಿಕಲ್ ಡಿಟೇಲ್ಸ್ ಕೇಳಿದರು. ಆದರೆ ಎಲೆಕ್ಷನ್ ಕಮಿಷನ್‌ನಿಂದ ಯಾವುದೇ ಮಾಹಿತಿ ಬರಲಿಲ್ಲ. ಎರಡು ವರ್ಷವಾದರೂ ಯಾವುದೇ ಮಾಹಿತಿ ಬರಲಿಲ್ಲ” ಎಂದು ಹೇಳಿದರು.
“ಎರಡು ವರ್ಷವಾದರೂ ಇವರು 18 ಪತ್ರ ಬರೆದರೂ ಮುಚ್ಚಿಡುವ ಕೆಲಸ ಮಾಡುತ್ತಿದ್ದಾರೆ. ಇದೆಲ್ಲ ಬಿಜೆಪಿಗಾಗಿ ಮಾಡುತ್ತಾ ಇದ್ದಾರೆ. ಯಾರು ಮಾಡುತ್ತಿದ್ದಾರೆ, ಏನ್ ಮಾಡುತ್ತಿದ್ದಾರೆ ಅಂತ ನಮಗೆ ಈಗಾಗಲೇ ಮಾಹಿತಿ ಇದೆ. ಆದರೆ ಅಧಿಕೃತ ಮಾಹಿತಿ ಎಲೆಕ್ಷನ್ ಕಮಿಷನ್‌ನಿಂದ ಬರಬೇಕು. ಎಲೆಕ್ಷನ್ ಕಮಿಷನ್ ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ತನಿಖೆ ಸ್ಥಗಿತಗೊಂಡಿದೆ ಅದು ಮುಂದುವರಿಬೇಕು ಅಂದರೆ ಚುನಾವಣಾ ಆಯೋಗ ಉತ್ತರ ಕೊಡಬೇಕು” ಎಂದು ಒತ್ತಾಯಿಸಿದರು.
Laxmi News 24×7