ಬೆಳ್ತಂಗಡಿ(ದಕ್ಷಿಣ ಕನ್ನಡ): ನೂರಾರು ಮೃತದೇಹಗಳನ್ನು ಹೂತು ಹಾಕಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪಾಯಿಂಟ್ ನಂಬರ್ 13ರಲ್ಲಿ ನಡೆಸಿದ ಶೋಧ ಕಾರ್ಯದಲ್ಲಿ ಯಾವುದೇ ಕಳೇಬರದ ಕುರುಹುಗಳು ಪತ್ತೆಯಾಗಿಲ್ಲ.
ಕಳೆದ 12 ದಿನಗಳಿಂದ ಎಸ್ಐಟಿ ನೇತೃತ್ವದಲ್ಲಿ ಶೋಧ ಕಾರ್ಯ ನಡೆಯುತ್ತಿದ್ದು, ನೇತ್ರಾವತಿ ನದಿ ಬದಿಯಲ್ಲಿ ಗುರುತು ಮಾಡಿದ 13ರ ಶೋಧ ಕುತೂಹಲಕ್ಕೆ ಕಾರಣವಾಗಿತ್ತು. ಅನಾಮಧೇಯ ಮುಸುಕುಧಾರಿ ದೂರುದಾರ ವ್ಯಕ್ತಿ ಈ ಸ್ಥಳದಲ್ಲಿ ಹಲವು ಶವಗಳನ್ನು ಹೂತು ಹಾಕಿರುವುದಾಗಿ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಈ ಜಾಗ ಅಧಿಕಾರಿಗಳೂ ಸೇರಿದಂತೆ ಎಲ್ಲರಲ್ಲೂ ಕುತೂಹಲದಾಯಕ ಮಾರ್ಕ್ ಆಗಿತ್ತು.
ಅದಲ್ಲದೇ, ಈ ಜಾಗದ ಬದಿಯಲ್ಲೇ ನೇತ್ರಾವತಿ ನದಿಗೆ ಅಳವಡಿಸಲಾಗಿದ್ದ ಕಿಂಡಿ ಅಣೆಕಟ್ಟು ಹಾಗೂ ವಿದ್ಯುತ್ ಪರಿವರ್ತಕ ಇದ್ದುದರಿಂದ ಡ್ರೋನ್ ಜಿಪಿಆರ್ ಟೆಕ್ನಾಲಜಿ ಬಳಸಿ ನಂತರ ಯಂತ್ರದ ಮೂಲಕ ಶೋಧ ಕಾರ್ಯವನ್ನು ಮಾಡಲಾಯಿತು.
ಮಧ್ಯಾಹ್ನ ಪ್ರಾರಂಭಗೊಂಡ ಕಾರ್ಯಾಚರಣೆ ಸಂಜೆ 6.30ರವರೆಗೆ ಸುಮಾರು 15 ಅಡಿ ಆಳ ಅಗೆದರೂ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಕತ್ತಲು ಆವರಿಸಿದ್ದರಿಂದ ಕಾರ್ಯಚರಣೆಯನ್ನು ನಾಳೆ ಮುಂದುವರಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಮುಸುಕುಧಾರಿ ದೂರುದಾರನ ವಿರುದ್ಧ ಆಕ್ರೋಶ: ಈಗಾಗಲೇ ರಾಜ್ಯಾದ್ಯಂತ ಕಾರ್ಯಾಚರಣೆಯ ಬಗ್ಗೆ ಹಾಗೂ ದೂರುದಾರನ ವಿರುದ್ಧ ಆಕ್ರೋಶ ಕಂಡುಬರುತ್ತಿದ್ದು, ಅಲ್ಲಲ್ಲಿ ಪ್ರತಿಭಟನೆಗಳೂ ನಡೆಯುತ್ತಿವೆ. ವಿಧಾನಸಭಾ ಕಲಾಪದಲ್ಲೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ.
13ನೇ ಸ್ಥಳದಲ್ಲೂ ಶವ ಸಿಗದಿದ್ದರೆ ಎಸ್ಐಟಿ ಶೋಧ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕಾಗುತ್ತದೆ. ಈ ಬಗ್ಗೆ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಇಂದು ನಡೆದ ಶಾಸಕಾಂಗ ಸಭೆಯಲ್ಲಿ ತಿಳಿಸಿದ್ದಾರೆ.
ಧರ್ಮಸ್ಥಳ ವಿಚಾರವಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ವಿಷಯ ಪ್ರಸ್ತಾಪಿಸಿದ್ದು, ಈ ಸಂಬಂಧ ಮಾತನಾಡಿದ ಸಿಎಂ, ಎಸ್ಐಟಿ ಮಾಡಿದ ಬಗ್ಗೆ ಜನರಿಂದ ಒಳ್ಳೆಯ ಅಭಿಪ್ರಾಯ ಬಂದಿದೆ. ಧರ್ಮಸ್ಥಳದ ವಿಚಾರದಲ್ಲಿ ಯಾರೂ ಭಾವನಾತ್ಮಕವಾಗಿ ಹೇಳಿಕೆ ನೀಡಬೇಡಿ ಎಂದು ಹೇಳಿರುವುದಾಗಿ ತಿಳಿದು ಬಂದಿದೆ.
Laxmi News 24×7