ಬೆಳಗಾವಿ: ಕೋಟ್ಯಂತರ ಭಕ್ತರ ಆರಾಧ್ಯ ದೇವತೆ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ ದೇವಸ್ಥಾನ ಸಂಪೂರ್ಣವಾಗಿ ಮುಳುಗಿತ್ತು. ಶ್ರಾವಣ ಹಿನ್ನೆಲೆ ಬರುತ್ತಿರುವ ಭಕ್ತರು ಮಳೆಯಿಂದ ತೀವ್ರ ಸಂಕಷ್ಟ ಎದುರಿಸಿದ್ದರು.
ಪ್ರವಾಹದ ನೀರು ದೇವಸ್ಥಾನದ ತುಂಬೆಲ್ಲಾ ವ್ಯಾಪಿಸಿದ್ದರಿಂದ ಕೊಳಚೆ, ಮಣ್ಣು, ಕೆಸರು ತುಂಬಿಕೊಂಡಿದೆ. ಇದರಿಂದ ದೇವಸ್ಥಾನದ ಆವರಣವು ಕೆಸರಿನಿಂದ ತುಂಬಿಕೊಂಡಿದೆ. ದೇವಸ್ಥಾನದ ಸಿಬ್ಬಂದಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ.
ನೀರಿನಲ್ಲಿ ತೊಯ್ದ ಹುಂಡಿ ಹಣ: ಪ್ರವಾಹದ ನೀರು ದೇವಸ್ಥಾನಕ್ಕೆ ನುಗ್ಗಿದ್ದರಿಂದ ಹುಂಡಿಯಲ್ಲಿನ ಹಣ ಸಂಪೂರ್ಣವಾಗಿ ತೊಯ್ದಿದೆ. ಭಕ್ತರು ಕಾಣಿಕೆ ರೂಪದಲ್ಲಿ ಹಾಕಿದ್ದ ನೋಟುಗಳು ನೀರಿನಿಂದ ಮುದ್ದೆಯಾಗಿವೆ. ಈಗ ದೇವಸ್ಥಾನ ಸಿಬ್ಬಂದಿ ಹಣವನ್ನು ಬಿಸಿಲಿನಲ್ಲಿ ಬಟ್ಟೆಯಂತೆ ಒಣಗಿಸಿ, ಸಂಗ್ರಹಿಸುತ್ತಿದ್ದಾರೆ.
ಕಳೆದ ಶುಕ್ರವಾರ ಸುರಿದ ಧಾರಾಕಾರ ಮಳೆಯಿಂದ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಜಲದಿಗ್ಬಂಧನ ಆಗಿತ್ತು. ನೂಲು ಹುಣ್ಣಿಮೆ ನಿಮಿತ್ತ ದೇವಿ ದರ್ಶನಕ್ಕೆ ಬರುತ್ತಿದ್ದ ಸಾವಿರಾರು ಭಕ್ತರು ಪರದಾಡಿದ್ದರು. ಇಲ್ಲಿನ ಎಣ್ಣೆ ಹೊಂಡ, ಟಿಕೆಟ್ ಕೌಂಟರ್, ಕಾಣಿಕೆ ಹುಂಡಿ ಎಲ್ಲವೂ ಪ್ರವಾಹದ ನೀರಿನಲ್ಲಿ ಮುಳುಗಿತ್ತು.
Laxmi News 24×7