ಮಂಗಳೂರು: “ಧರ್ಮಸ್ಥಳದ ವಠಾರವನ್ನು ಎಸ್ಐಟಿ ಅಗೆಯುತ್ತಿದೆ. ಕೇಂದ್ರ ಸರ್ಕಾರ, ಪ್ರಧಾನಮಂತ್ರಿ ಮೋದಿಯವರು ಏನು ಮಾಡುತ್ತಿದ್ದಾರೆ? ಧರ್ಮಸ್ಥಳದ ಹೆಸರು ಹಾಳಾಗುತ್ತಿದೆ. ಮುಖ್ಯಮಂತ್ರಿಯವರೇ ನಾಚಿಕೆಯಾಗುತ್ತಿದೆ ನನಗೆ, ಒಂದು ದೇವಸ್ಥಾನವನ್ನು ಹಾಳುಗೆಡವುತ್ತಿರುವಾಗ ಮಾತನಾಡುವ ಧೈರ್ಯ ಇಲ್ಲವೇ ನಿಮಗೆ? ನಾನು ಇದರ ವಿರುದ್ಧ ಧ್ವನಿ ಎತ್ತುತ್ತೇನೆ. ನನ್ನನ್ನು ಬೇಕಾದರೆ ಜೈಲಿಗೆ ಹಾಕಿ. ಆದರೆ ಧರ್ಮಸ್ಥಳದ ಹೆಸರು ಹಾಳು ಮಾಡಲು ನಾನು ಬಿಡುವುದಿಲ್ಲ” ಎಂದು ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಎಸ್ಐಟಿಯವರೇ, ಸಿಎಂ ಅವರೇ ಏನು ಮಾಡುತ್ತಿದ್ದೀರಿ? ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಸಮುದಾಯದಲ್ಲಿ ಸತ್ತ ಮನುಷ್ಯರ ಮೃತದೇಹವನ್ನು ದೇವಸ್ಥಾನ- ಮಸೀದಿ- ಚರ್ಚ್ ಅಡಿಯಲ್ಲಿ ಹೂಳಲಾಗುತ್ತದೆ. ಇದು ಭಾರತದ ಸಂಸ್ಕೃತಿ. ಕಣ್ಣೀರು ಬರುತ್ತಿದೆ ನನಗೆ. ಎಸ್ಐಟಿಯವರು ಧರ್ಮಸ್ಥಳದಲ್ಲಿ ಮೃತದೇಹದ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಏನೂ ಸಿಗಲಿಲ್ಲ. ಏನೂ ಸಿಗುವುದೂ ಇಲ್ಲ. ಹೆಗ್ಗಡೆಯವರೇ ಹೆದರದಿರಿ ನಿಮ್ಮೊಂದಿಗೆ ನಾವಿದ್ದೇವೆ. ಕುದ್ರೋಳಿ ದೇವಸ್ಥಾನವಿದೆ. ಧೈರ್ಯದಿಂದ ಇದನ್ನು ಎದುರಿಸಿ” ಎಂದು ಹೇಳಿದರು.
“ಮೋದಿಯವರೇ, ನಿಮಗೆ ಧೈರ್ಯ, ತಾಕತ್ತಿದ್ದರೆ ಹೋಗಿ ಧರ್ಮಸ್ಥಳಕ್ಕೆ. ನಿಂತಲ್ಲಿ ಭಾಷಣ ಮಾಡಿ. ಮಸೀದಿ, ಚರ್ಚ್‌ಗಳಲ್ಲಿ ಶವ ಹೂತಿಟ್ಟಿಲ್ಲವೇ ಎಂದು ಕೇಳಿ. ಕುದ್ರೋಳಿಯ ಭಕ್ತ ಮಾತ್ರವಲ್ಲ, ನಾನು ಧರ್ಮಸ್ಥಳದ ಭಕ್ತನೂ ಹೌದು” ಎಂದರು.
“ಧರ್ಮದ ಸ್ಥಳ ಧರ್ಮಸ್ಥಳವನ್ನು ಅವಹೇಳನ ಮಾಡುತ್ತಿರುವಾಗ ತಾನೇಕೆ ಮಾತನಾಡುತ್ತಿಲ್ಲ, ತಾನೇಕೆ ಸುಮ್ಮನಿದ್ದೇನೆ ಎಂದು ದೇಶ ಮಾತನಾಡುತ್ತಿದೆ. ಕುದ್ರೋಳಿ ಕ್ಷೇತ್ರ ಮಾಡುವಾಗ ಎಷ್ಟು ಕಷ್ಟವಾಗಿದೆ. ಅದೇ ರೀತಿ ಧರ್ಮಸ್ಥಳದಂತಹ ಕ್ಷೇತ್ರವನ್ನು ನಡೆಸಿಕೊಂಡು ಹೋಗಲು ಎಷ್ಟು ಕಷ್ಟವಿದೆ ಎಂಬುದರ ಅರಿವು ನನಗಿದೆ. ಆದ್ದರಿಂದ ಡಾ. ಡಿ.ವೀರೇಂದ್ರ ಹಗ್ಗಡೆಯವರೇ ನಿಮ್ಮೊಂದಿಗೆ ನಾನಿದ್ದೇನೆ. ಧರ್ಮಸ್ಥಳದೊಟ್ಟಿಗೆ ಭಾರತ ದೇಶ ಮಾತ್ರವಲ್ಲ, ಜಗತ್ತೇ ಇದೆ” ಎಂದು ಜನಾರ್ದನ ಪೂಜಾರಿ ಬೆಂಬಲ ನೀಡಿದರು.
Laxmi News 24×7