ಬಾಗಲಕೋಟೆ: ಸಹಪಾಠಿಗಳ ರ್ಯಾಗಿಂಗ್ಗೆ ಮಾನಸಿಕವಾಗಿ ನೊಂದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ನಡೆದಿದೆ.
ಅಂಜಲಿ ಮುಂಡಾಸ (21) ಮೃತ ವಿದ್ಯಾರ್ಥಿನಿ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ತಾನು ಸಹಪಾಠಿಗಳು ನೀಡುತ್ತಿದ್ದ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಯುವತಿ ಡೆತ್ನೋಟ್ನಲ್ಲಿ ಬರೆದಿದ್ದಾರೆ. ಜೊತೆಗೆ ತನಗೆ ರ್ಯಾಗಿಂಗ್ ಮಾಡಿದ ತನ್ನಿಬ್ಬರು ಸಹಪಾಠಿಗಳ ಹೆಸರು, ಅವರ ವಿಳಾಸವನ್ನು ಅದರಲ್ಲಿ ನಮೂದಿಸಿದ್ದಾರೆ. ಇವರ ವಿರುದ್ಧ ಕ್ರಮ ಜರುಗಿಸಿ ಎಂದೂ ಕೋರಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಂಜಲಿ ಅವರು ಗುಳೇದಗುಡ್ಡ ಪಟ್ಟಣದ ಭಂಡಾರಿ ಕಾಲೇಜಿನಲ್ಲಿ ಬಿಎ ಅಂತಿಮ ವರ್ಷ ಅಧ್ಯಯನ ಮಾಡುತ್ತಿದ್ದರು. ಶುಕ್ರವಾರ ಕಾಲೇಜು ಮುಗಿಸಿಕೊಂಡು ಬಂದ ಆಕೆ, ಅಲ್ಲಿ ನಡೆದ ರ್ಯಾಗಿಂಗ್ ಬಗ್ಗೆ ನೊಂದಿದ್ದಳು ಎಂದು ತಿಳಿದುಬಂದಿದೆ.
ವಿದ್ಯಾರ್ಥಿನಿಯ ಪೋಷಕರು ನೀಡಿದ ದೂರಿನ ಮೇರೆಗೆ ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Laxmi News 24×7