Breaking News

ಶಾಲಾ ಮಕ್ಕಳ ಸುರಕ್ಷತೆಗೆ 25 ಅಂಶಗಳ ಪಟ್ಟಿ: ಬೆಳಗಾವಿಯಲ್ಲಿ ಹೇಗಿದೆ ಕ್ರಮ..? ಡಿಡಿಪಿಐ, ಶಿಕ್ಷಕರು, ಮಕ್ಕಳು ಹೇಳುವುದೇನು..?

Spread the love

ಬೆಳಗಾವಿ: ಬೆಳಗಾವಿ ಜಿಲ್ಲೆಯ ಸೇರಿ ಕೆಲವೆಡೆ ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರಿಗೆ ವಿಷ ಬೆರೆಸಿದ ಪ್ರಕರಣಗಳನ್ನು ಶಾಲಾ ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿ, ವಿದ್ಯಾರ್ಥಿಗಳ ಸುರಕ್ಷತೆಗೆ ನಿತ್ಯವೂ ಪಾಲಿಸಬೇಕಾದ 25 ಅಂಶಗಳನ್ನು ಪಟ್ಟಿ ಮಾಡಿ ಸುತ್ತೋಲೆ ಹೊರಡಿಸಿದೆ. ಈ ಹೊಣೆಯನ್ನು ಮುಖ್ಯಶಿಕ್ಷಕರೇ ನಿಭಾಯಿಸಬೇಕು ಎಂದು ಕಟ್ಟು ನಿಟ್ಟಾಗಿ ಸೂಚಿಸಿದೆ. ಈ ಸಂಬಂಧ ಬೆಳಗಾವಿ ಜಿಲ್ಲೆಯಲ್ಲಿ ಯಾವ ರೀತಿ ಕ್ರಮ ವಹಿಸಲಾಗಿದೆ ಎಂಬ ಕುರಿತ ವಿವರ ಇಲ್ಲಿದೆ.

ಹೌದು, ಶಾಲಾ ಮಕ್ಕಳ ಸುರಕ್ಷತೆಗಾಗಿ ಮುಖ್ಯಶಿಕ್ಷಕರು ಶಾಲೆ ಆರಂಭವಾಗುತ್ತಿದ್ದಂತೆ ಕೆಲ ಪ್ರಾಥಮಿಕ ಅಂಶಗಳನ್ನು ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು. ಸೂಚನಾ ಫಲಕದಲ್ಲಿ ಬರೆಸಬೇಕು. ಸಹ ಶಿಕ್ಷಕರ ಸಹಾಯ ಪಡೆಯಬೇಕು. ಸುರಕ್ಷತಾ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಮುಂದೆ ಲೋಪಗಳು ಕಂಡುಬಂದರೆ ಅವರನ್ನೇ ನೇರ ಹೊಣೆ ಮಾಡಲಾಗುವುದು. ಬಿಇಒ, ಡಿಡಿಪಿಐ ಸೇರಿದಂತೆ ಮೇಲಾಧಿಕಾರಿಗಳು ಕಾಲಕಾಲಕ್ಕೆ ಶಾಲೆಗಳಿಗೆ ಭೇಟಿ ನೀಡಬೇಕು. ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.

ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​ನಲ್ಲಿ ಜುಲೈ 14ರಂದು ಅದೇ ಗ್ರಾಮದ ಕೆಲವರು ವಿಷ ಹಾಕಿದ್ದರು. ಈ ನೀರು ಕುಡಿದ 12 ಮಕ್ಕಳು ಅಸ್ವಸ್ಥರಾಗಿದ್ದರು. ವಿಷ ಹಾಕಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಸವದತ್ತಿ ಪೊಲೀಸರು ಬಂಧಿಸಿದ್ದರು. ಇದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದರ ಪರಿಣಾಮ ಇಡೀ ರಾಜ್ಯಾದ್ಯಂತ ಎಲ್ಲಾ ಶಾಲೆಗಳಲ್ಲಿ ಸುರಕ್ಷಿತ ಕ್ರಮ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಇಲಾಖೆ 25 ಅಂಶಗಳ ಸುತ್ತೋಲೆ ಹೊರಡಿಸಿದೆ.

25 ಅಂಶಗಳು ಯಾವುವು?

  • ಶಾಲಾ ಆವರಣ ಮತ್ತು ಸುತ್ತಲಿನ ಸುರಕ್ಷತೆ
  • ಶಾಲಾ ಪ್ರವೇಶ ದ್ವಾರ
  • ಶಾಲಾ ಕಂಪೌಂಡ್
  • ಕೊಠಡಿಗಳ ಪರಿಶೀಲನೆ
  • ಶೌಚಾಲಯ ಸ್ವಚ್ಛತೆ
  • ಕುಡಿಯುವ ನೀರಿನ ಲಭ್ಯತೆ
  • ಕುಡಿಯುವ ನೀರಿನ ಸ್ವಚ್ಛತೆ
  • ಒಹೆಚ್ ಟಿ ಮತ್ತು ಸಂಪ್ ಟ್ಯಾಂಕ್ ನಲ್ಲಿ ಕೆಟ್ಟ ವಾಸನೆ ಬರುವ ನೀರು ಇಲ್ಲ ಎಂಬುದನ್ನು ಪರಿಶೀಲಿಸುವುದು‘ ಶಾಲಾ ನೀರಿನ ಸಂಪ್ ಮುಚ್ಚಿರುವ ಬಗ್ಗೆ
  • ತುರ್ತು ಸ್ಥಿತಿಗೆ ಸನ್ನದ್ಧತೆ
  • ಪ್ರಥಮ ಚಿಕಿತ್ಸಾ ಕಿಟ್ ಲಭ್ಯತೆ
  • ಸಡಿಲವಾಗಿ ನೇತಾಡುವ ಕೇಬಲ್, ವಿದ್ಯುತ್ ತಂತಿ/ಶಾಲಾ ಆವರಣದ ಮೇಲೆ ಹಾದು ಹೋಗುವ ವಿದ್ಯುತ್ ತಂತಿಗಳ ಇಲ್ಲ ಪರಿಶೀಲಿಸುವುದು
  • ಬಿಸಿಯೂಟದ ಪರಿಶೀಲನೆ
  • ಸಿಲಿಂಡರ್ ಬಗ್ಗೆ ಸುರಕ್ಷಾ ಕ್ರಮವನ್ನು ವಹಿಸುವುದು
  • ಆಹಾರಧಾನ್ಯಗಳ ಪರಿಶೀಲನೆ
  • ಅನಧಿಕೃತ ವ್ಯಕ್ತಿಗಳ ಪ್ರವೇಶವನ್ನು ತಡೆಗಟ್ಟುವ ಬಗ್ಗೆ
  • ಮಕ್ಕಳ ಹಾಜರಾತಿ
  • ಗೈರು ಹಾಜರಾದ ಮಕ್ಕಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡುವುದು
  • SATS ನಲ್ಲಿ ಮಕ್ಕಳ ಹಾಜರಾತಿ ಹಾಕುವುದು
  • ಮಕ್ಕಳ ಸುರಕ್ಷತೆ ಮತ್ತು ಮೇಲ್ವಿಚಾರಣೆ
  • CWSN ಮಕ್ಕಳ ಸುರಕ್ಷತೆ
  • ತರಗತಿ ವೇಳಾಪಟ್ಟಿಯಂತೆ ಶಿಕ್ಷಕರ ನಿಯೋಜನೆ
  • ಆರೋಗ್ಯ ಮತ್ತು ಸ್ವಚ್ಛತೆ
  • ಸಿಸಿಟಿವಿ ಚಲನವಲನ ಇರುವ ಬಗ್ಗೆ ಖಾತ್ರಿ
  • ಸೂಚನಾ ಫಲಕದಲ್ಲಿ ಅಗತ್ಯ ಸೂಚನೆ ನೀಡುವುದು

ಹೊಸ ಟ್ಯಾಂಕ್ ಸ್ಥಾಪನೆ: ನೀರಿನ ಟ್ಯಾಂಕ್ ಹೊರಗೆ ಇತ್ತು. ಆ ವೇಳೆ ಅವಘಡ ಸಂಭವಿಸಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈಗ ಅಡುಗೆ ಕೊಠಡಿಯಲ್ಲಿ ಹೊಸ ನೀರಿನ ಟ್ಯಾಂಕ್ ಅಳವಡಿಸಿದ್ದೇವೆ. ಶಾಲೆಯ ಆವರಣದಲ್ಲಿ ನಾಲ್ಕು ಸಿಸಿಟಿವಿ ಕ್ಯಾಮರಾಗಳನ್ನು ಹಾಕಿದ್ದೇವೆ. ಕಂಪೌಂಡ್ ಮೇಲೆ ತಂತಿ ಬೇಲಿ ಹಾಕುತ್ತಿದ್ದೇವೆ. ಮಕ್ಕಳಿಗೆ ಸುರಕ್ಷತಾ ಕ್ರಮಗಳನ್ನು ತಿಳಿಸಿದ್ದೇವೆ. ಬೇರೆ ಊರುಗಳಿಂದ ಬರುವ ಮಕ್ಕಳಿಗೆ ರಸ್ತೆ ಸುರಕ್ಷತಾ ನಿಯಮ ತಿಳಿಸಿದ್ದೇವೆ. ಎಲ್ಲಾ ಕೊಠಡಿಗಳಿಗೆ ವಿದ್ಯುತ್ ಸಂಪರ್ಕ, ಪ್ಯಾನ್ ವ್ಯವಸ್ಥೆ ಕಲ್ಪಿಸಿದ್ದೇವೆ ಎಂದು ಈಟಿವಿ ಭಾರತಕ್ಕೆ ಮುಖ್ಯೋಪಾಧ್ಯಾಯ ಸುಲೇಮಾನ್ ಗೋರಿನಾಯಿಕ ವಿವರಿಸಿದರು.

ಬಿಇಒ ಹೇಳಿದ್ದಿಷ್ಟು: ಸವದತ್ತಿ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಬಿ‌.ಎನ್. ಬ್ಯಾಳಿ ಅವರನ್ನು ಈಟಿವಿ ಭಾರತ ಪ್ರತಿನಿಧಿ ಸಂಪರ್ಕಿಸಿದಾಗ
ಮೇಲಾಧಿಕಾರಿಗಳ ನಿರ್ದೇಶನಂತೆ ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಲು ತಾಲೂಕಿನ ಎಲ್ಲಾ ಮುಖ್ಯೋಪಾಧ್ಯಾಯರಿಗೆ ನಿರ್ದೇಶನ ನೀಡಲಾಗಿದೆ. ಕುಡಿಯುವ ನೀರು, ಶಾಲಾ ಸ್ವಚ್ಛತೆ ಮತ್ತು ಸುರಕ್ಷತೆ ಪ್ರಥಮ ಆದ್ಯತೆಯಾಗಿ ಪರಿಗಣಿಸಿ ಕ್ರಿಯಾತ್ಮಕ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ. ಅಲ್ಲದೇ ಕುಡಿಯುವ ನೀರಿನ ಟ್ಯಾಂಕ್ ಅಡುಗೆ ಕೊಠಡಿ, ದಾಸ್ತಾನು ಕೊಠಡಿ ಇಲ್ಲವೇ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ವ್ಯವಸ್ಥೆ ಮಾಡಲು ಸೂಚಿಸಿದ್ದೇವೆ ಎಂದರು.

ಬೆಳಗಾವಿ ಡಿಡಿಪಿಐ ಲೀಲಾವತಿ ಹಿರೇಮಠ ಈಟಿವಿ ಭಾರತ ಜೊತೆ ಮಾತನಾಡಿ, ಸವದತ್ತಿ ತಾಲೂಕಿನ ಹೂಲಿಕಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಮಾರ್ಕಂಡೇಯ ನಗರ ಸರ್ಕಾರಿ ಪ್ರೌಢಶಾಲೆಗಳು ಸೇರಿದಂತೆ ಮತ್ತಿತರ ಜಿಲ್ಲೆಯ ಶಾಲೆಗಳಲ್ಲಿ ನಡೆದ ಘಟನೆಗಳ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ವಿವರ ಮತ್ತು ನಿರ್ದಿಷ್ಟ ಮಾನದಂಡಗಳು ಇರುವ ಸುತ್ತೋಲೆಯನ್ನು ಆಗಸ್ಟ್ 4ರಂದು ಹೊರಡಿಸಿದ್ದಾರೆ. ಆ ಪ್ರಕಾರ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು ಪ್ರತಿದಿನ ಈ 25 ಅಂಶಗಳನ್ನು ಪರಿಶೀಲನೆ ಮಾಡಿ, ದೈನಂದಿನ ಶೈಕ್ಷಣಿಕ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಪ್ರತಿಕ್ರಿಯೆ ನೀಡಿದರು.

ಶಾಲೆ ಪ್ರಾರಂಭ ಆಗುವ ಪೂರ್ವದಲ್ಲಿ ಶಾಲೆಯ ಸುತ್ತಲಿನ ವಾತಾವರಣ, ನೀರಿನ ಟ್ಯಾಂಕ್ ಪರಿಶೀಲಿಸಬೇಕು. ಅದೇ ರೀತಿ ಅಪಾಯದ ಸ್ಥಿತಿಯಲ್ಲಿರುವ ವಿದ್ಯುತ್ ತಂತಿ, ಮರಗಳು, ಶಾಲೆಯ ಕೊಠಡಿ, ಕಂಪೌಂಡ್. ಅಲ್ಲದೇ ನೀರು ನಿಂತು ಮಕ್ಕಳು ಕಾಲು ಜಾರಿ ಬೀಳುವ ಸಾಧ್ಯತೆಯನ್ನು ಸ್ಪಷ್ಟವಾಗಿ ಪರಿಶೀಲಿಸಿ. ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ನೋಡಿಕೊಂಡು ಶಾಲೆ ಪ್ರಾರಂಭಿಸಬೇಕು ಅಂತಾ ಸೂಚಿಸಿದ್ದೇವೆ ಎಂದು ಡಿಡಿಪಿಐ ಹೇಳಿದರು.

ಅದೇ ರೀತಿ ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯ ವ್ಯಕ್ತಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳ ಜೊತೆಗೆ ನಾವು ಸಭೆ ಮಾಡಿ ತಿಳುವಳಿಕೆ ನೀಡಿದ್ದೇವೆ. ಅವರು ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರಿಂದ 25 ಅಂಶಗಳ ಕುರಿತು ದೃಢೀಕರಣ ಮಾಡಿಕೊಳ್ಳುವ ಪ್ರಕ್ರಿಯೆ ಶುರುವಾಗಿದೆ‌. ಅಲ್ಲದೇ ಧಾರವಾಡ ಅಪರ ಆಯುಕ್ತರು ಕೂಡ ನಮ್ಮಿಂದ ಯಾವುದೇ ಅಪಾಯಕಾರಿ ಪರಿಸ್ಥಿತಿ ಇಲ್ಲ ಎಂಬುದನ್ನು ಪ್ರತಿದಿನ ದೃಢಪಡಿಸಿಕೊಳ್ಳುತ್ತಿದ್ದಾರೆ. ಒಂದು ವೇಳೆ ಏನಾದರೂ ಅನಾಹುತ ಸಂಭವಿಸಿದರೆ ತಕ್ಷಣ ಕ್ರಮ ವಹಿಸುವಂತೆ ಸೂಚಿಸಿದ್ದಾರೆ. ನಿರಂತರ ಮಳೆ ಸುರಿಯುವ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆ ಮತ್ತು ಸಂರಕ್ಷಣೆಗೆ ಸಂಬಂಧಿಸಿದಂತೆ ಸ್ಥಾನಿಕ ರಜೆ ಘೋಷಿಸುವಂತೆ ಮುಖ್ಯ ಶಿಕ್ಷಕರಿಗೆ ಜಿಲ್ಲಾ ಪಂಚಾಯತಿ ಸಿಇಒ ಅವರು ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಅಲ್ಲದೇ ಮಳೆ ಆಗುವಾಗ ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ಕಳಿಸುವ ಜವಾಬ್ದಾರಿ ಶಿಕ್ಷಕರಿಗೆ ವಹಿಸಲಾಗಿದೆ. ಜೊತೆಗೆ ಶಾಲಾ ಅವಧಿ ಬಿಟ್ಟು ಬೆಳಗ್ಗೆ ಇಲ್ಲವೇ ಸಂಜೆ ಬಿಇಒ, ನೋಡಲ್ ಅಧಿಕಾರಿಗಳು, ಕ್ಷೇತ್ರ ಸಮನ್ವಯ ವ್ಯಕ್ತಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳ ಜೊತೆಗೆ ಜಾಗೃತಿ, ತಿಳುವಳಿಕೆ ಸಭೆ ಮಾಡಿದ್ದೇವೆ ಎಂದು ಲೀಲಾವತಿ ಹಿರೇಮಠ ಸ್ಪಷ್ಟಪಡಿಸಿದರು.

ಎಲ್ಲಾ ಸುರಕ್ಷತೆ ಕೈಗೊಂಡಿದ್ದೇವೆ: ಬೆಳಗಾವಿಯ ಸರ್ಕಾರಿ ಸರದಾರ್ಸ್ ಪ್ರೌಢಶಾಲೆ ಉಪ ಪ್ರಾಂಶುಪಾಲ ಎಸ್.ಎಸ್. ಹಾದಿಮನಿ ಅವರು ಮಾತನಾಡಿ, ನಮ್ಮದು 175 ವರ್ಷದ ಹಳೆಯ ಶಾಲೆ ಆಗಿದೆ. ನಮ್ಮಲ್ಲಿ ಶಿಥಿಲಗೊಂಡ ನಾಲ್ಕು ಕೊಠಡಿಗಳಲ್ಲಿ ತರಗತಿಗಳನ್ನು ನಡೆಸುತ್ತಿಲ್ಲ. ಬಾವಿ ನೀರನ್ನೇ ಶುದ್ಧೀಕರಣ ಮಾಡಿ ಕುಡಿಯುವ ನೀರಾಗಿ ಬಳಸುತ್ತಿದ್ದೇವೆ. ವಿದ್ಯುತ್ ಅಪಾಯ ಇಲ್ಲ. ಅಲ್ಲದೇ ಒಂದೂವರೇ ತಿಂಗಳ ಹಿಂದೆ ಅಪಾಯದಲ್ಲಿದ್ದ ಮರಗಳ ಟೊಂಗೆಗಳನ್ನು ಕತ್ತರಿಸಿದ್ದೇವೆ. ರಸ್ತೆ ಸುರಕ್ಷತೆ, ಸಿಗ್ನಲ್ ನಿಯಮಗಳ ಕುರಿತು ಮತ್ತು ರಸ್ತೆಯಲ್ಲಿ ಗುಂಪು ಗುಂಪಾಗಿ ಹೋಗದೇ ಇಬ್ಬಿಬ್ಬರೆ ನಡೆದುಕೊಂಡು ಹೋಗುವಂತೆ ಮಕ್ಕಳಿಗೆ ತಿಳಿಸಿದ್ದೇವೆ. ಒಟ್ಟಾರೆ ನಮ್ಮ ಶಾಲೆಯಲ್ಲಿ ಎಲ್ಲ ರೀತಿಯ ಸುರಕ್ಷತಾ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು.

ಅಸುರಕ್ಷಿತ ವಾತಾವರಣ ಇಲ್ಲ: ಸರ್ಕಾರಿ ಸರ್ದಾರ್ಸ್ ಪ್ರೌಢಶಾಲೆ ವಿದ್ಯಾರ್ಥಿನಿ ಅಕ್ಷತಾ ಕೊಡ್ಲಿ ಮಾತನಾಡಿ, ಪ್ರಾರ್ಥನೆ ವೇಳೆ ಶಿಕ್ಷಕರು ಸುರಕ್ಷತಾ ಕ್ರಮಗಳ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ಶುದ್ಧ ಕುಡಿಯುವ ನೀರು, ಒಳ್ಳೆಯ ಬಿಸಿಯೂಟ ಕೊಡುತ್ತಾರೆ. ಶೌಚಾಲಯಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿದ್ದಾರೆ. ಶಾಲೆಯ ಆವರಣ ತುಂಬಾ ಸ್ವಚ್ಛವಾಗಿದೆ. ಹಾಗಾಗಿ, ಅಂಥ ಅಸುರಕ್ಷಿತ ವಾತಾವರಣ ನಮ್ಮಲ್ಲಿಲ್ಲ ಎಂದರು.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ