ಹೊಸಕೋಟೆ(ಬೆಂ. ಗ್ರಾಮಾಂತರ): “ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಹೊಸಕೋಟೆಗೆ ಶೀಘ್ರ ಮೆಟ್ರೋ ಸಂಪರ್ಕ ಕಲ್ಪಿಸಲು ಅಗತ್ಯ ಯೋಜನೆ ಸಿದ್ಧಪಡಿಸಲಾಗುವುದು” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಹೊಸಕೋಟೆ ತಾಲೂಕಿನ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ತಾಲೂಕು ಪಂಚಾಯಿತಿ ಹೊಸಕೋಟೆ ಹಾಗೂ 28 ಗ್ರಾಮ ಪಂಚಾಯಿತಿಗಳ ವತಿಯಿಂದ ಇ-ಸ್ವತ್ತು ಹಾಗೂ ಹಕ್ಕು ಪತ್ರ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
“ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲವು ಬೆಂಗಳೂರು ನಗರಕ್ಕೆ ಹೊಂದಿಕೊಂಡಿದ್ದು, ತಾಲೂಕುಗಳ ಅಭಿವೃದ್ಧಿಗೆ ಎಲ್ಲ ರೀತಿಯ ನೆರವು ನೀಡಲಾಗುವುದು. ಹೊಸಕೋಟೆಯೂ ಸಹ ಬಹಳ ವೇಗವಾಗಿ ಅಭಿವೃದ್ಧಿ ಕಾಣುತ್ತಿದ್ದು, ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಮೆಟ್ರೋ ಸಂಪರ್ಕ ಹೊಸಕೋಟೆಗೆ ಕಲ್ಪಿಸಲಾಗುವುದು. ಇದಕ್ಕಾಗಿ ಡಿಪಿಆರ್ ಸಿದ್ದಪಡಿಸಲು ಅಧಿಕಾರಿಗಳು ಸೂಚಿಸುತ್ತೇನೆ” ಎಂದರು.
“5 ಗ್ಯಾರಂಟಿಗಳಿಂದ ನಮ್ಮ ಕೈಗೆ ಶಕ್ತಿ ತುಂಬಿದೆ. ಬೆಲೆ ಏರಿಕೆ, ಆದಾಯ ಪಾತಾಳಕ್ಕೆ ಇಳಿದ ಸಂಧರ್ಭದಲ್ಲಿ ಗ್ಯಾರಂಟಿ ಜಾರಿ ತಂದೆವು. ಈಗ ಅದೇ ಗ್ಯಾರಂಟಿಗಳು ದೇಶಕ್ಕೆ ಮಾದರಿ ಎನಿಸಿಕೊಂಡಿದೆ. ಇತರ ರಾಜ್ಯಗಳು ನಮ್ಮ ಗ್ಯಾರಂಟಿಗಳನ್ನು ಫಾಲೋ ಮಾಡುತ್ತಿದ್ದಾರೆ. ನರೇಗಾ ಯೋಜನೆ, ಆಹಾರ ಭದ್ರತೆ ಕಾಯ್ದೆ, ಉಳುವವನಿಗೆ ಭೂಮಿ, ಭಗರ್ ಹುಕುಂ, ಕ್ಷೀರಧಾರೆ ಸಬ್ಸಿಡಿ, ಐದು ಗ್ಯಾರಂಟಿ ಮುಂತಾದ ಯೋಜನೆಗಳು ಕೇಂದ್ರ ಹಾಗೂ ರಾಜ್ಯಗಳಲ್ಲಿ ನಮ್ಮ ಸರ್ಕಾರ ಇದ್ದಾಗಲೇ ಜಾರಿಯಾದವು. ಜನರ ಸೇವೆಯಿಂದ ಸರ್ಕಾರ ಉಳಿಯಲು ಸಾಧ್ಯ. ನಾವು ಮಾಡುವ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ”.
“ಆರನೇ ಗ್ಯಾರಂಟಿ ಇ-ಸ್ವತ್ತು, ಇಂದು ಹೊಸಕೋಟೆಯಲ್ಲಿ 6000 ಇ-ಸ್ವತ್ತು ನೀಡಲಾಗುತ್ತಿದೆ. 1 ಕೋಟಿ 11 ಲಕ್ಷ 11 ಸಾವಿರ ಸ್ವತ್ತು ರಾಜ್ಯಾದ್ಯಂತ ನೀಡಲಾಗುತ್ತಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬಿ ಖಾತೆಯಿಂದ ಎ ಖಾತೆಗೆ ಆಸ್ತಿ ವರ್ಗ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ರೈತರ ಕೃಷಿ ಭೂಮಿಗಳಿಗೆ 19,000 ಕೋಟಿ ರೂ.ಗಳ ವೆಚ್ಚದಲ್ಲಿ 10 ಹೆಚ್.ಪಿ ವರೆಗೆ ವಿದ್ಯುತನ್ನು ಪ್ರತಿ ನಿತ್ಯ 07 ಗಂಟೆ ನೀಡುತ್ತಿದ್ದೇವೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆ ಕಟ್ಟೆ, ಕುಡಿಯುವ ನೀರು ತುಂಬಿಸಲು ಸರ್ಕಾರ ಪಣ ತೊಟ್ಟಿದ್ದು, 2027ಕ್ಕೆ ಎತ್ತಿನಹೊಳೆ ಯೋಜನೆ ಪೂರ್ಣ ಗೊಳ್ಳಲಿದೆ” ಎಂಬ ಭರವಸೆ ನೀಡಿದರು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಮಾತನಾಡಿ, “ಚುನಾವಣೆಯಲ್ಲಿ ಮಾತು ನೀಡಿದಂತೆ ನಾವು ಎಲ್ಲಾ ಗ್ಯಾರಂಟಿ ಯೋಜನೆಗಳು ಜಾರಿಗೊಳಿಸಿದ್ದು, ನುಡಿದಂತೆ ನಡೆದಿದ್ದೇವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮೆಟ್ರೋ, ಯುಜಿಡಿ, ಎತ್ತಿನಹೊಳೆ ಯೋಜನೆಯು ಆದಷ್ಟು ಬೇಗ ಬರಬೇಕು” ಎನ್ನುವುದು ನನ್ನ ಒತ್ತಾಸೆಯಾಗಿದೆ” ಎಂದರು.
Laxmi News 24×7