ಮೈಸೂರು : ಐದು ಹುಲಿಗಳ ಸಾವು ವಿಷಪ್ರಾಶನ ಆಗಿದೆ ಎಂದು ದೃಢಪಟ್ಟರೆ, ತಪ್ಪಿತಸ್ಥರಿಗೆ ಏಳು ವರ್ಷ ಶಿಕ್ಷೆಯಾಗಲಿದೆ ಎಂದು ನಿವೃತ್ತ ಡಿಸಿಎಫ್ ಪೂವಯ್ಯ ಹೇಳಿದ್ದಾರೆ.
ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಗುಂಡ್ಲುಪೇಟೆಯಲ್ಲಿ ಎಸಿಎಫ್ ಆಗಿದ್ದಾಗ ಒಂದು ಕಪ್ಪು ಚಿರತೆ, ಮತ್ತೊಂದು ನಾರ್ಮಲ್ ಚಿರತೆ ಸೇರಿ ಎರಡು ಚಿರತೆ ಮರಿಗೆ ವಿಷ ಹಾಕಿದ್ದರು. ಆ ವೇಳೆ ಕಾನೂನು ಪ್ರಕಾರವೇ ಶಿಕ್ಷೆಯಾಗಿತ್ತು. ಈ ಪ್ರಕರಣದಲ್ಲೂ ಅದೇ ಮಾದರಿ ಶಿಕ್ಷೆ ಆಗಲಿದೆ ಎಂದಿದ್ದಾರೆ.
ಇದರಲ್ಲಿ ಅಧಿಕಾರಿಗಳ ಪಾತ್ರವೇನಿಲ್ಲ. ಹುಲಿಗಳ ಸಾವಿಗೆ ವಿಷ ಹಾಕಿದವರೇ ನೇರ ಹೊಣೆಯಾಗುತ್ತಾರೆ. 5 ಹುಲಿ ಸಾವು ದೊಡ್ಡ ನಷ್ಟವಾಗಿದೆ. ಹುಲಿಗಳ ಸಂರಕ್ಷಣೆಗೆ ಅರಣ್ಯ ಇಲಾಖೆಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಿಳಿಸಿದ್ದಾರೆ.
ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಸಮೀಪದ ಅರಣ್ಯದಲ್ಲಿ ತಾಯಿ ಹುಲಿ ಹಾಗೂ ನಾಲ್ಕು ಮರಿಗಳಿಗೆ ವಿಷವುಣಿಸಿ ಸಾವಾಗಿರಬಹುದು. ಹುಲಿಗಳಿಗೆ ವಿಷವುಣಿಸಿ ಸಾವು ಸಂಭವಿಸಿದ್ದರೆ, ಈ ಪ್ರಕರಣದ ತಪ್ಪಿತಸ್ಥರಿಗೆ ಸುಮಾರು 7 ವರ್ಷ ಜೈಲು ಶಿಕ್ಷೆಯಾಗಲಿದೆ ಎಂದಿದ್ದಾರೆ.
ಹುಲಿಗಳು ಒಂದು ಪ್ರಾಣಿಯನ್ನು ಕೊಂದರೆ ಸಂಪೂರ್ಣ ಮುಗಿಯುವವರೆಗೂ ಬೇರೆ ಪ್ರಾಣಿ ಬೇಟೆಯಾಡುವುದಿಲ್ಲ. ಇತ್ತೀಚಿಗೆ ಈ ಭಾಗದಲ್ಲಿ ಒಂದು ಹಸುವನ್ನು ಹುಲಿ ಬಲಿ ಪಡೆದಿದೆ ಎನ್ನುವ ಮಾಹಿತಿ ಇದೆ. ಬಲಿ ಪಡೆದ ಹಸುವಿನ ದೇಹಕ್ಕೆ ವಿಷ ಹಾಕಿರಬಹುದು. ಫಾರೆನ್ಸಿಕ್ ಲ್ಯಾಬ್ನಿಂದ ಸುಮಾರು ಒಂದು ವಾರದ ನಂತರ ವರದಿ ಬರಲಿದೆ. ಈ ವರದಿಯಲ್ಲಿ ಸತ್ಯಾಂಶ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.
Laxmi News 24×7