ಮಂಡ್ಯ, ಜೂನ್ 2: ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವತಿಯ ಬೆನ್ನುಬಿದ್ದ ಹಿಂದೂ ಮುಖಂಡನೊಬ್ಬ (Hindu Leader) ನಿರಂತರ ನಾಲ್ಕು ವರ್ಷಗಳಿಂದ ಆಕೆಗೆ ಕಿರುಕುಳ ನೀಡಿದ್ದಾನೆ. ಅಲ್ಲದೆ, ಆಕೆಗೆ ನಿಶ್ಚಯವಾಗುತ್ತಿದ್ದ ಮದುವೆಯನ್ನೆಲ್ಲ ರದ್ದು ಮಾಡಿಸಿದ್ದಲ್ಲದೆ, ಆ್ಯಸಿಡ್ ದಾಳಿ (Acid Attack threat) ಮಾಡುವ ಬೆದರಿಕೆಯೊಡ್ಡಿದ್ದ ಆರೋಪದಲ್ಲಿ ಸದ್ಯ ಆತನ ವಿರುದ್ಧ ಮಂಡ್ಯದ (Mandya) ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆ ನೀಡಿದ್ದ ದೂರಿನ ಆಧಾರದಲ್ಲಿ ಹಿಂದೂ ಮುಖಂಡ ಚಿಕ್ಕಬಳ್ಳಿ ಬಾಲಕೃಷ್ಣ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
4 ವರ್ಷಗಳ ಹಿಂದೆ ಸಂತ್ರಸ್ತೆ ಹಾಗೂ ಬಾಲಕೃಷ್ಣಗೆ ಮದುವೆ ನಿಶ್ಚಯವಾಗಿತ್ತು. ಆ ವೇಳೆ, ಸಂತ್ರಸ್ತೆಯು ಬಾಲಕೃಷ್ಣ ಜೊತೆಯಲ್ಲಿ ಫೋಟೋ ತೆಗೆಸಿಕೊಂಡಿದ್ದರು. ಆದರೆ, ಬಾಲಕೃಷ್ಣ ಹಲವು ಸುಳ್ಳುಗಳನ್ನು ಹೇಳಿ ಮದುವೆ ನಿಶ್ಚಯ ಮಾಡಿಕೊಂಡಿದ್ದು ನಂತರ ಸಂತ್ರಸ್ತೆಯ ಅರಿವಿಗೆ ಬಂದಿತ್ತು. ಹೀಗಾಗಿ ಮದುವೆ ನಿರಾಕರಿಸಿದ್ದರು. ಇದು ಬಾಲಕೃಷ್ಣನನ್ನು ಕೆರಳಿಸಿತ್ತು.
ಹಳೇ ಫೋಟೊ ತೋರಿಸಿ ವಿವಾಹ ರದ್ದು ಮಾಡುತ್ತಿದ್ದ ಬಾಲಕೃಷ್ಣ
ಅದಾದ ನಂತರ ಸಂತ್ರಸ್ತೆಗೆ ಬೇರೆ ಮದುವೆ ಪ್ರಸ್ತಾಪಗಳು ಬಂದಿದ್ದವು. ಆದರೆ, ಆರೋಪಿ ಬಾಲಕೃಷ್ಣ ಹಳೇ ಫೋಟೋ ತೋರಿಸಿ ಚಾಡಿ ಹೇಳಿ ವಿವಾಹ ರದ್ದಾಗುವಂತೆ ಮಾಡುತ್ತಿದ್ದ. ಇಷ್ಟೇ ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾನೆಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೆ, ಆ್ಯಸಿಡ್ ಎರಚುವುದಾಗಿಯೂ, ಕೊಲೆ ಮಾಡುವುದಾಗಿಯೂ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಿದ್ದಾರೆ.
Laxmi News 24×7