ಬೆಳಗಾವಿ, ಫೆಬ್ರವರಿ 23: ಕನ್ನಡ ಮಾತನಾಡು ಎಂದಿದ್ದಕ್ಕೆ ಕೆಎಸ್ಆರ್ಟಿಸಿ (KSRTC) ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದ ಮತ್ತೊಬ್ಬನನ್ನು ಬಂಧಿಸಲಾಗಿದೆ. 2 ದಿನಗಳ ಹಿಂದೆ ಕಂಡಕ್ಟರ್ ಮಹದೇವಪ್ಪ ದೂರು ದಾಖಲಿಸಿದ್ದರು. ಹೀಗಾಗಿ ಅಪ್ರಾಪ್ತ ಸೇರಿ ನಾಲ್ವರನ್ನು ಬಂಧಿಸಿದ್ದ ಪೊಲೀಸರು, ಇಂದು ಮತ್ತೋರ್ವ ಆರೋಪಿ ಮೋಹನ್ ಹಂಚಿನಮನಿ(25) ಅರೆಸ್ಟ್ ಮಾಡಿದ್ದಾರೆ. ಸದ್ಯ ಮಾರಿಹಾಳ ಠಾಣೆ ಪೊಲೀಸರಿಂದ ಒಟ್ಟು ಐವರನ್ನು ಬಂಧಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾದ ಇನ್ನೂ ಕೆಲವು ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಇನ್ನೂ ಬಸ್ ಇಲ್ಲದೇ ಪ್ರಯಾಣಿಕರು ಪರದಾಡುತ್ತಿರುವ ಹಿನ್ನೆಲೆ ಸಂಸದ ಗೋವಿಂದ್ ಕಾರಜೋಳ ಕೂಡ ಸರ್ಕಾರ ಇದನ್ನ ಬಗೆ ಹರಿಸಿ, ಬಸ್ ಸಂಚಾರಕ್ಕೆ ಒತ್ತಾಯಿಸಿದ್ದಾರೆ. ಈ ಎಲ್ಲ ಬೆಳವಣಿಗೆ ನಡುವೆ ನಾಳೆ ಬೆಳಗಾವಿಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಆಗಮಿಸುತ್ತಿದ್ದು, ಸಾರಿಗೆ ಇಲಾಖೆಗೆ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದು ಬಸ್ ಆರಂಭದ ಕುರಿತು ಕೂಡ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರದಲ್ಲಿ ಮರಾಠಿ ಪುಂಡರಿಂದ ಭಾಷಾ ಕಿರಿಕ‌್ ಮುಂದುವರೆದಿದೆ. ಪುಣೆಯಲ್ಲಿ ಕರ್ನಾಟಕ ಸಾರಿಗೆ ಬಸ್ ತಡೆದು ಕಪ್ಪು ಮಸಿಯಿಂದ ಜೈ ಮಹಾರಾಷ್ಟ್ರ ಬರೆದು ಪುಂಡಾಟಿಕೆ ಮೆರೆದಿದ್ದಾರೆ. ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಮಹಾರಾಷ್ಟ್ರಕ್ಕೆ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಎಂಇಎಸ್ ಮುಖಂಡ ಬೆಳಗಾವಿ ನೆಲದಲ್ಲಿ ನಿಂತು ಕನ್ನಡ ಸಂಘಟನೆಯವರಿಗೆ ನಾಲಾಯಕ ಎಂದು ನಾಲಿಗೆ ಹರಿ ಬಿಟ್ಟಿದ್ದಾರೆ. ಇತ್ತ ಘಟನೆ ಬಗ್ಗೆ ಸಂಸದ ಗೋವಿಂದ್ ಕಾರಜೋಳ ಕೂಡ ಪ್ರತಿಕ್ರಿಯೆ ನೀಡಿದ್ದು, ಆದರೆ ಬೆಳಗಾವಿಯ ಯಾವೊಬ್ಬ ನಾಯಕರು ಇದರ ಬಗ್ಗೆ ತುಟಿ ಬಿಚ್ಚುತ್ತಿಲ್ಲ.
Laxmi News 24×7