ಬೆಂಗಳೂರು: ಕರ್ನಾಟಕ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ನ್ಯಾಯ ಎರಡನ್ನೂ ಸಮನಾಗಿ ನಿಭಾಯಿಸುತ್ತಾ ದೇಶದಲ್ಲೇ ಅತ್ಯುತ್ತಮ ಅಭಿವೃದ್ಧಿ ಸಾಧಿಸುತ್ತಿರುವ ರಾಜ್ಯಗಳ ಪೈಕಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಬೆಂಗಳೂರಿನ ಮಾಣಿಕ್ ಷಾ ಮೈದಾನದಲ್ಲಿ 76ನೇ ಗಣರಾಜ್ಯೋತ್ಸವ ಪ್ರಯುಕ್ತ ರಾಜ್ಯಪಾಲರು ಧ್ವಜಾರೋಹಣ ನೆರವೇರಿಸಿ ಬಳಿಕ ವಿವಿಧ ತುಕಡಿಗಳಿಂದ ಗೌರವ ರಕ್ಷೆ ಸ್ವೀಕರಿಸಿ, ತೆರೆದ ವಾಹನದಲ್ಲಿ ಕವಾಯತು ವೀಕ್ಷಿಸಿದರು. ನಂತರ ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದರು.
![]()
ಎಲ್ಲರಿಗೂ ನಮಸ್ಕಾರ ಎನ್ನುತ್ತಾ ಕನ್ನಡದಲ್ಲೇ ಭಾಷಣ ಆರಂಭಿಸಿದ ಅವರು, ಕರ್ನಾಟಕ ಸಂವಿಧಾನದ ಮಹತ್ತರ ಆಶಯವಾದ ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ನೆಲೆಗೊಳಿಸಲು ಶಕ್ತಿಮೀರಿ ಶ್ರಮಿಸುತ್ತಿದೆ. ದೇಶದಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯಿಂದ ಸಾಮಾಜಿಕ ಮತ್ತು ಆರ್ಥಿಕ ನ್ಯಾಯಗಳಿಗೆ ಆಗುತ್ತಿರುವ ಹಿನ್ನಡೆಯನ್ನು ಮತ್ತು ಜನರಿಗೆ ಆಗುತ್ತಿರುವ ಸಂಕಷ್ಟಗಳನ್ನು ಅರಿತುಕೊಂಡು ಜಾರಿಗೆ ತಂದ ಐದು ಗ್ಯಾರಂಟಿ ಕಲ್ಯಾಣ ಯೋಜನೆಗಳು ಯಶಸ್ವಿಯಾಗಿ ಜಾರಿಗೊಂಡು ದೇಶದ ಗಮನ ಸೆಳೆದಿವೆ. ಈ ಯೋಜನೆಗಳಿಂದ ಆರ್ಥಿಕ ಬಿಕ್ಕಟ್ಟು, ಅಭಿವೃದ್ಧಿ ಕುಂಠಿತವಾದೀತು ಎಂಬ ನಿರಾಶಾವಾದಿ ಭವಿಷ್ಯ ಸುಳ್ಳಾಗಿದೆ ಎಂದು ತಿಳಿಸಿದರು.ಕರ್ನಾಟಕ ರಾಜ್ಯ ಸಂವಿಧಾನದ ಆಶಯಗಳಿಗನುಗುಣವಾಗಿ ಒಕ್ಕೂಟ ಧರ್ಮದ ನೀತಿರಿವಾಜುಗಳಿಗೆ ಬದ್ಧವಾಗಿ ದೇಶದ ಅಭಿವೃದ್ಧಿಗೆ ಶ್ರಮಿಸಿದೆ. ಒಕ್ಕೂಟ ಧರ್ಮಕ್ಕೆ ಚ್ಯುತಿಯಾದಾಗ ತನ್ನ ಸಾಂವಿಧಾನಿಕ ಹಕ್ಕುಗಳಿಗಾಗಿ ಧ್ವನಿ ಎತ್ತಿದೆ. ಮುಂದೆಯೂ ಸಂವಿಧಾನ ವಿಧಿಸಿದ ಒಕ್ಕೂಟ ತತ್ವಗಳ ಅನುಸಾರ ರಾಜ್ಯ-ರಾಜ್ಯಗಳ ಸಂಬಂಧ ಮತ್ತು ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಸಂಬಂಧ ಮುಂದುವರಿಯಬೇಕು ಎಂದು ಕರ್ನಾಟಕ ಬಯಸುತ್ತದೆ ಎಂದರು.
Laxmi News 24×7