Breaking News

ಪ್ರಿಯಾಂಕಾ ಗಾಂಧಿ ಕಿತ್ತೂರು ಚನ್ನಮ್ಮನಂತೆ‌:ಖರ್ಗೆ

Spread the love

ಬೆಳಗಾವಿ: ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧ ಶಕ್ತಿಶಾಲಿಯಾಗಿ ಹೋರಾಟ ಮಾಡುವ ಹೆಣ್ಣುಮಗಳು ಪ್ರಿಯಾಂಕಾ ಗಾಂಧಿ. ಪ್ರಿಯಾಂಕಾ ಮೆತ್ತಗೆ ಕಾಣುತ್ತಾರೆ, ಮುಟ್ಟಿ ನೋಡಿ. ನಮ್ಮ ಕಿತ್ತೂರು ಚನ್ನಮ್ಮ ಪ್ರಿಯಾಂಕಾ ಗಾಂಧಿ. ನಾನೇನು ಹೊಗಳುತ್ತಿಲ್ಲ. ಅವರಿಗೆ ಅಷ್ಟೊಂದು ಶಕ್ತಿ ಇದೆ ಎಂದು ಎಐಸಿಸಿ ಅಧ್ಯಕ್ಷ‌ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯ ಪಟ್ಟರು.

ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಂದೆ ಕಳೆದುಕೊಂಡಾಗ ಪ್ರಿಯಾಂಕಾ ಅವರಿಗೆ ನಾಲ್ಕೈದು ವರ್ಷ. ತಾಯಿ ರಕ್ಷಣೆಯಲ್ಲಿ ಬೆಳೆದು ಬಂದ ಅವರು ಇಂದು ಈ ಹಂತಕ್ಕೆ ಬಂದು ನಿಂತಿದ್ದಾರೆ. ಪ್ರಿಯಾಂಕಾ ಎಂದೂ ಕೂಡ ತನ್ನ ಕೊರತೆ, ಕಮಜೋರಿ ದೇಶಕ್ಕೆ ತೋರಿಸಿದವರಲ್ಲ. ಗಾಂಧಿ ಕುಟುಂಬ ಅಂಥದ್ದು. ಇಂಥ ಕುಟುಂಬಕ್ಕೆ ಮೋದಿ, ಅಮಿತ್ ಶಾ ಮತ್ತು ಅವರ ಚಮಚಾಗಳೂ ಬೈಯ್ಯುತ್ತಾರೆ. ದೇಶದ ಜನ ಹೆದರಬೇಕಿಲ್ಲ. ಬಿಜೆಪಿ ವಿರುದ್ಧ ಹೋರಾಡಲು ನಾವು ಸಿದ್ಧರಾಗಿದ್ದೇವೆ ಎಂದು ಖರ್ಗೆ ಎಚ್ಚರಿಸಿದರು.

ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಆಗಿದ್ದ ನನ್ನನ್ನ ರಾಷ್ಟ್ರ ಅಧ್ಯಕ್ಷರನ್ನಾಗಿಸಿದ್ದಾರೆ: ಬ್ಲಾಕ್‌ ಕಾಂಗ್ರೆಸ್‌ ಆಗಿದ್ದ ನಾನು ಇಂದು ಅಖಿಲ ಭಾರತ ಕಾಂಗ್ರೆಸ್‌ ಪಕ್ಷದ ನಾಯಕನನ್ನಾಗಿ ಮಾಡಿದ್ದಾರೆ. ಇದು ಸಣ್ಣ ಮಾತಲ್ಲ. ಚುನಾವಣೆ ಆದರೂ ನನ್ನೊಂದಿಗೆ ಇದ್ದು ಕೈಜೋಡಿಸಿ, ಸಹಾಯ ಮಾಡಿ ಇಂದು ಆರಿಸಿ ತಂದಿದ್ದಾರೆ. ಅದಕ್ಕಾಗಿ ನಾನು ಅವರಿಗೆಲ್ಲ ಚಿರ ಋಣಿ ಇದ್ದೇನೆ. ಕರ್ನಾಟಕ ಕಾಂಗ್ರೆಸ್‌ನ ಒಬ್ಬ ಕಾರ್ಯಕರ್ತ ಅಖಿಲ ಭಾರತ ಮಟ್ಟದ ಅಧ್ಯಕ್ಷನಾಗಲು ನಿಮ್ಮೆಲ್ಲರ ಆಶೀರ್ವಾದ ಇಲ್ಲದೇ ಸಾಧ್ಯವಿರಲಿಲ್ಲ. ಇದು ಕಾಂಗ್ರೆಸ್‌ನ ಗುಣ. ಬಿಜೆಪಿಯವರು ಏನೇ ಹೇಳಲಿ, ಬರೀ ಮಾತಲ್ಲಿ ಹೇಳುತ್ತಾರೆ. ಬಿಜೆಪಿ, ಆರ್‌ಎಸ್‌ಎಸ್‌, ಹಿಂದೂ ಮಹಾಸಭಾದವರು ದಲಿತರ ಜತೆಯಲ್ಲಿ ಯಾವತ್ತೂ ಇಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹರಿಹಾಯ್ದರು.

ಕೆಪಿಸಿಸಿ, ಸಿದ್ದರಾಮಯ್ಯಗೆ ಧನ್ಯವಾದ ಸಲ್ಲಿಸುತ್ತೇನೆ: ಇವರು ಯಾವಾಗಲೂ ದಲಿತರ ವಿರೋಧಿಗಳು. ರೈತರು, ಬಡವರು, ದಲಿತರ ಬಗ್ಗೆ ಕಾಳಜಿ ಇಲ್ಲ. ಎಂಎಸ್‌ಪಿ ಹೆಚ್ಚು ಮಾಡಲು ಮೋದಿ ಅವರು ಎಂದೂ ಗಮನ ಕೊಟ್ಟಿಲ್ಲ. ಆದರೆ, ದಲಿತರ ಪರ ಎಂದು ಪ್ರಚಾರ ಮಾತ್ರ ತೆಗೆದುಕೊಳ್ಳುತ್ತಾರೆ. ಡಿ.26ರಂದು ನಾವು ಹೊಸ ಸಂಕಲ್ಪ ಮಾಡಿದ್ದೇವೆ. ನವಸತ್ಯಾಗ್ರಹ ಸಭೆ ಮಾಡಿದ್ದೇವೆ. ಕರ್ನಾಟಕದ ಕಾಂಗ್ರೆಸ್‌ ಬಲಶಾಲಿ ಎಂದು ನೀವು ತೋರಿಸಿದ್ದೀರಿ. ಇಷ್ಟು ಅಚ್ಚುಕಟ್ಟಾದ ಕಾರ್ಯಕ್ರಮ ನಾನು ಬೇರೆಲ್ಲೂ ನೋಡಿಲ್ಲ. ಕೆಪಿಸಿಸಿ ಹಾಗೂ ಸಿದ್ದರಾಮಯ್ಯ ಸರ್ಕಾರ ಹಾಗೂ ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆ. ಇದು ಕಿತ್ತೂರು ರಾಣಿ ಚನ್ನಮ್ಮನ ಜನ್ಮಭೂಮಿ. ಈ ನಾಡಿನಲ್ಲಿ ಹುಟ್ಟಿ ದೇಶದ ಸ್ವಾತಂತ್ರ್ಯದ ರಕ್ಷಣೆಗೆ ಚನ್ನಮ್ಮ ಹೋರಾಡಿದರು ಎಂದು ಖರ್ಗೆ ಅವರು ಸ್ಮರಿಸಿದರು.

ಭಾರತಕ್ಕಾಗಿ ಸಾಯಲು ಬಯಸುತ್ತೇನೆ: ನಾನು ಬದುಕಿರಲು ಬಯಸುತ್ತೇನೆ, ಕೇವಲ ಭಾರತಕ್ಕಾಗಿ ಸಾಯಲು ಬಯಸುತ್ತೇನೆ, ಅದು ಕೇವಲ ಭಾರತಕ್ಕಾಗಿ. ಬದುಕಿದರೂ ದೇಶಕ್ಕಾಗಿ, ಸತ್ತರೂ ದೇಶಕ್ಕಾಗಿ ಎಂಬ ಸಂದೇಶವನ್ನು ಗಾಂಧಿ ಇದೇ ನೆಲದಿಂದ ಕರೆ ಕೊಟ್ಟರು. ಅಂಥವರ ಬಗ್ಗೆಯೂ ಬಿಜೆಪಿಯವರು ಇಂದು ಟೀಕೆ ಮಾಡುತ್ತಾರೆ. ಅವರನ್ನು ಗುಂಡು ಹಾಕಿ ಕೊಂದವರು ಯಾರು? ಗೋಡ್ಸೆ ಯಾರ ಶಿಷ್ಯ, ಸಾವರ್ಕರ್‌ ಶಿಷ್ಯ. ಇವರೆಲ್ಲರನ್ನೂ ಮೋದಿ, ಶಾ ಅವರು ಹೊತ್ತು ಮೆರೆಯುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.


Spread the love

About Laxminews 24x7

Check Also

ಅಕ್ರಮ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

Spread the loveಬೆಳಗಾವಿ: ಮಹಾನಗರ ಪಾಲಿಕೆ 8 ಮತ್ತು 9 ವಾರ್ಡ್‌ನಲ್ಲಿನ  ಆಸ್ತಿಗಳಿಗೆ ಮತ್ತೊಬ್ಬರ ಹೆಸರಿನಲ್ಲಿ ಬಾಂಡ್ ಆಧಾರದ ಮೇಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ