ಬೆಂಗಳೂರು: ಮೋಟಾರು ವಾಹನ ಅಪಘಾತ ಪ್ರಕರಣಗಳಲ್ಲಿ ಪಾವತಿಸುವ ಪರಿಹಾರ ಮೊತ್ತದಲ್ಲಿ ಮೆಡಿಕ್ಲೈಮ್ನ ಅಡಿಯಲ್ಲಿ ಪಾವತಿಸಿರುವ ಮೊತ್ತವನ್ನು ಕಡಿತಗೊಳಿಸಿ ಉಳಿದ ಮೊತ್ತ ಪಾವತಿಸಬಹುದು ಎಂದು ಹೈಕೋರ್ಟ್ ತಿಳಿಸಿದೆ.
ಬೆಂಗಳೂರಿನ ಮಾರತ್ಹಳ್ಳಿಯ ವಾಸಿ ಹನುಮಂತಪ್ಪ ಪರವಾಗಿ ಮೋಟಾರು ವಾಹನಗಳ ಅಪಘಾತ ಪರಿಹಾರ ನ್ಯಾಯಾಧಿಕರಣ(ಎಂಎಸಿಟಿ)ದ ಆದೇಶವನ್ನು ಪ್ರಶ್ನಿಸಿ ವಿಮಾ ಕಂಪನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹಂಚಾಟೆ ಸಂಜೀವ್ ಕುಮಾರ್ ಅವರಿದ್ದ ಏಕ ಸದಸ್ಯಪೀಠ ಸೋಮವಾರ ಈ ಆದೇಶ ನೀಡಿತು.
ಅರ್ಜಿದಾರರ ಕುಟುಂಬಕ್ಕೆ ಮೆಡಿಕ್ಲೈಮ್ ಪಾಲಿಸಿಯಡಿ ನೀಡಿರುವ 1.8 ಲಕ್ಷ ರೂ. ಮೊತ್ತವನ್ನು ಕಡಿತಗೊಳಿಸಿ ಉಳಿದ ಪರಿಹಾರಕ್ಕೆ ವಾರ್ಷಿಕ ಶೇ.6ರಷ್ಟು ಬಡ್ಡಿ ಸೇರಿಸಿ 4,93,839 ರೂ. ಪಾವತಿ ಮಾಡಬೇಕು ಎಂದು ವಿಮಾ ಕಂಪನಿಗೆ ಕೋರ್ಟ್ ಆದೇಶಿಸಿದೆ. ಅಲ್ಲದೆ, ನ್ಯಾಯಾಲಯ ಈ ಪ್ರಕರಣದಲ್ಲಿ ಪರಿಹಾರವನ್ನು ನಿಗದಿಪಡಿಸುವಾಗ ಈಗಾಗಲೇ ಮೆಡಿಕ್ಲೈಮ್ ವಿಮಾ ನೀತಿಯಡಿ ಪಡೆದಿರುವ ವೈದ್ಯಕೀಯ ವೆಚ್ಚವನ್ನು ಕಡಿತಗೊಳಿಸಬೇಕಾಗುತ್ತದೆ. ಹಾಗಾಗಿ ಉಳಿದ ಪರಿಹಾರ ಮೊತ್ತವನ್ನು ವಿಮಾ ಕಂಪನಿ ಪಾವತಿಸಬೇಕು ಎಂದು ತಿಳಿಸಿದೆ.
ವಿಚಾರಣೆ ವೇಳೆ ವಿಮಾ ಕಂಪೆನಿ ಪರವಾಗಿ ವಾದ ಮಂಡಿಸಿದ ವಕೀಲರು, ಮನೀಶ್ ಗುಪ್ತಾ ಪ್ರಕರಣದಲ್ಲಿ ನೀಡಿರುವ ತೀರ್ಪು ಉಲ್ಲೇಖಿಸಿ, ಮೋಟಾರು ವಾಹನ ಕಾಯಿದೆಯಡಿ ಪರಿಹಾರವನ್ನು ನೀಡುವಾಗ ಅದರಲ್ಲಿ ಮೆಡಿಕ್ಲೈಮ್ ಅಡಿ ಮೊದಲೇ ಪಾವತಿಸಿದ ವೆಚ್ಚ ಕಡಿತ ಮಾಡಿದ ನಂತರ ಉಳಿದ ಪರಿಹಾರವನ್ನು ನೀಡಬೇಕು ಎಂಬುದಾಗಿ ಹೈಕೋರ್ಟ್ ಹೇಳಿದೆ. ಆದ್ದರಿಂದ ಈ ಪ್ರಕರಣದಲ್ಲಿ ಆ ತೀರ್ಪನ್ನು ಅನ್ವಯಿಸಬೇಕು ಎಂದು ಕೋರಿತ್ತು. ಇದನ್ನು ನ್ಯಾಯಪೀಠ ಪುರಸ್ಕರಿಸಿ ಆದೇಶಿಸಿದೆ.
Laxmi News 24×7