Breaking News

ಎಸಿ ಕೋರ್ಟ್​ಗಳಲ್ಲಿ ಬಾಕಿ ಇರುವ ಪ್ರಕರಣ 6 ತಿಂಗಳಲ್ಲಿ ಇತ್ಯರ್ಥಗೊಳಿಸಿ

Spread the love

ಬೆಂಗಳೂರು: ಉಪ ವಿಭಾಗಾಧಿಕಾರಿಗಳ (ಎಸಿ) ನ್ಯಾಯಾಲಯಗಳಲ್ಲಿ ಅವಧಿ ಮೀರಿ ಬಾಕಿ ಇರುವ ಎಲ್ಲ ಪ್ರಕರಣಗಳನ್ನೂ ಮುಂದಿನ ಆರು ತಿಂಗಳೊಳಗಾಗಿ ನ್ಯಾಯಯುತ ಇತ್ಯರ್ಥಕ್ಕೆ ಒಳಪಡಿಸಬೇಕು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಎಲ್ಲಾ ಅಧಿಕಾರಿಗಳಿಗೆ ಸಮಯದ ಗಡುವನ್ನು ನೀಡಿದ್ದಾರೆ.

ವಿಕಾಸಸೌಧದಲ್ಲಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲ ಉಪ ವಿಭಾಗಾಧಿಕಾರಿಗಳ ಜೊತೆಗೆ ಸಚಿವರು ಏಕ ಕಾಲದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. “ಎಸಿ ನ್ಯಾಯಾಲಯಗಳಲ್ಲಿ ಯಾವ ಪ್ರಕರಣಗಳನ್ನೂ ಆರು ತಿಂಗಳ ಅವಧಿಗಿಂತ ಹೆಚ್ಚಿನ ಕಾಲ ಇಟ್ಟುಕೊಳ್ಳುವಂತಿಲ್ಲ ಎಂಬ ಕಾನೂನಿದೆ. ಆದರೆ, ಕಳೆದ ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿದ ವೇಳೆ ಎಸಿ ನ್ಯಾಯಾಲಯಗಳಲ್ಲಿ ಅವಧಿ ಮೀರಿದ 60 ಸಾವಿರಕ್ಕೂ ಅಧಿಕ ಪ್ರಕರಣಗಳಿದ್ದವು. ಈ ಎಲ್ಲ ಪ್ರಕರಣಗಳನ್ನೂ ಮುಂದಿನ ಒಂದು ವರ್ಷದಲ್ಲಿ ಇತ್ಯರ್ಥಗೊಳಿಸಿ, ಸರ್ಕಾರಿ ಕಚೇರಿಗಳಿಗೆ ಜನರ ಅನಗತ್ಯ ಅಲೆದಾಟಕ್ಕೆ ಬ್ರೇಕ್ ಹಾಕಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶವಾಗಿತ್ತು” ಎಂದರು.

ಆದರೆ, “ಒಂದೂವರೆ ವರ್ಷ ಕಳೆದರೂ ನಮ್ಮ ಈ ಉದ್ದೇಶ ಈಡೇರಿಲ್ಲ. ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ವಿಶೇಷ ಉಪ – ವಿಭಾಗಾಧಿಕಾರಿಗಳನ್ನು ನೇಮಕ ಮಾಡಿದರೂ ಸಹ ಶೇ.55ರಷ್ಟು ಪ್ರಕರಣಗಳನ್ನು ಮಾತ್ರ ವಿಲೇವಾರಿ ಮಾಡಲಾಗಿದೆ. ಎಸಿ ನ್ಯಾಯಾಲಯಗಳಲ್ಲಿ ಇನ್ನೂ 29,000ಕ್ಕೂ ಅಧಿಕ ಪ್ರಕರಣಗಳು ಬಾಕಿ ಇವೆ. ಇದರಿಂದ ಜನಸಾಮಾನ್ಯರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದು, ಮುಂದಿನ ಮುಂದಿನ ಆರು ತಿಂಗಳೊಳಗಾಗಿ ಈ ಎಲ್ಲಾ ಪ್ರಕರಣಗಳನ್ನು ಅಧಿಕಾರಿಗಳು ನ್ಯಾಯಯುತ ವಿಲೇವಾರಿಗೆ ಒಳಪಡಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಅಭಿಯಾನ ಮಾದರಿಯಲ್ಲಿ ಕೆಲಸಕ್ಕೆ ಮುಂದಾಗಬೇಕು” ಎಂದು ಕರೆ ನೀಡಿದರು.

“ಆರು ತಿಂಗಳಲ್ಲಿ ಎಲ್ಲ ಪ್ರಕರಣಗಳನ್ನು ತಹಬದಿಗೆ ತರಬೇಕು ಎಂಬುದು ಸರ್ಕಾರದ ಸಂಕಲ್ಪ. ಒಂದು ವರ್ಷದಲ್ಲಿ ಆಗಬೇಕಾದ ಕೆಲಸ ಎರಡು ವರ್ಷ ಆದ್ರೂ ಆಗಿಲ್ಲ ಅಂದ್ರೆ ಸರ್ಕಾರ ಮತ್ತು ನಿಮಗೆ ಶೋಭೆ ತರಲ್ಲ. ಹೀಗಾಗಿ ಈ ವಾರದಿಂದಲೇ ರೆಗ್ಯುಲರ್ ಎಸಿಗಳು ತಿಂಗಳೊಂದಕ್ಕೆ 200 ರಿಂದ 250 ಪ್ರಕರಣಗಳನ್ನು ವಿಲೇವಾರಿ ಮಾಡಿದರೆ, ವಿಶೇಷ ಉಪ – ವಿಭಾಗಾಧಿಕಾರಿಗಳು ಕನಿಷ್ಠ 70 ರಿಂದ 100 ಪ್ರಕರಣಗಳನ್ನು ವಿಲೇವಾರಿ ಮಾಡಬೇಕು. ಆರು ತಿಂಗಳ ನಂತರವೂ ಪ್ರಕರಣಗಳನ್ನು ಬಾಕಿ ಉಳಿಸಿಕೊಂಡಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು. ಅಲ್ಲದೆ, ಈ ಸಂಬಂಧ ಪ್ರತಿ ತಿಂಗಳೂ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು” ಎಂದು ಎಚ್ಚರಿಸಿದರು.

“ನ್ಯಾಯಾಲಯಗಳ ತಕರಾರು ಪ್ರಕರಣಗಳ ವಿಲೇವಾರಿಯ ಜೊತೆಗೆ ಪೋಡಿ ದುರಸ್ತಿ, ನಮೂನೆ 3 – 9 ಮಿಸ್ಮ್ಯಾಚ್ ಹಾಗೂ ಫೌತಿ ಖಾತೆ ಆಂದೋಲನ ಉಪ ವಿಭಾಗಾಧಿಕಾರಿಗಳ ಮಟ್ಟದಲ್ಲೇ ನಡೆಯಬೇಕು. ಹೀಗಾಗಿ ಅಧಿಕಾರಿಗಳು ಜನರ ಸಮಸ್ಯೆ ಹಾಗೂ ತಮ್ಮ ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಕೆಲಸಗಳನ್ನೂ ಅಭಿಯಾನ ಮಾದರಿಯಲ್ಲಿ ನಡೆಸಬೇಕು” ಎಂದು ಸಚಿವರು ಕಿವಿಮಾತು ಹೇಳಿದರು.


Spread the love

About Laxminews 24x7

Check Also

ಗದಗ-ಯಲವಿಗಿ ರೈಲ್ವೆ ಯೋಜನೆ ಶೀಘ್ರ ಆರಂಭಿಸಲು ಕೇಂದ್ರ ರೈಲ್ವೆ ಸಚಿವರಿಗೆ ಸಂಸದ ಬಸವರಾಜ ಬೊಮ್ಮಾಯಿ ಮನವಿ

Spread the loveನವದೆಹಲಿ: ಗದಗ ಯಲವಿಗಿ ರೈಲು ಯೋಜನೆ ಡಿಪಿಆರ್‌ಗೆ ಒಪ್ಪಿಗೆ ನೀಡಿ ತ್ವರಿತಗತಿಯಲ್ಲಿ ಆರಂಭಿಸುವಂತೆ ಕೇಂದ್ರ ರೈಲ್ವೆ ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ