ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿ ಸಿಎಂ ವಿರುದ್ಧ ಅಭಿಯೋಜನೆಗೆ ರಾಜ್ಯಪಾಲರು ಅನುಮತಿ ನೀಡದೆ ಇದ್ದರೆ ಸೆಪ್ಟಂಬರ್ ತಿಂಗಳಿನಲ್ಲಿ ಸಚಿವ ಸಂಪುಟ ಸಣ್ಣ ಮಟ್ಟಿಗೆ ಪುನಾರಚನೆ ಆಗುವ ಸಾಧ್ಯತೆ ಇದೆ.
ಈಗಿರುವ ಸಂಪುಟದಿಂದ ಐದಾರು ಸಚಿವರನ್ನು ಕೈಬಿಟ್ಟು, ಬೇರೆಯವರಿಗೆ ಅವಕಾಶ ಕಲ್ಪಿಸುವ ಬಗ್ಗೆ ಪಕ್ಷದಲ್ಲಿ ಗಂಭೀರ ಚಿಂತನೆ ನಡೆದಿದೆ.
ಈಚೆಗೆ ಮುಡಾ ಹಗರಣ ವಿಷಯವಾಗಿ ವಿಪಕ್ಷಗಳ ಪಾದಯಾತ್ರೆ ಸಂದರ್ಭದಲ್ಲೇ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸಚಿವರಿಗೆ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಈ ಬಗ್ಗೆ ಸ್ಪಷ್ಟ ಸುಳಿವು ನೀಡಿದ್ದರು. ಈಗ ಆ ನಿಟ್ಟಿನಲ್ಲಿ ತೆರೆಮರೆಯಲ್ಲಿ ಸಿದ್ಧತೆಗಳು ನಡೆದಿವೆ ಎನ್ನಲಾಗಿದೆ.
ಸತ್ಯಶೋಧನ ಸಮಿತಿ ನಡೆಸಿದ ಮುಖಾಮುಖಿ ಸಭೆ ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಕೆಲವು ನಿಷ್ಕ್ರಿಯ ಸಚಿವರನ್ನು ಕೈಬಿಡುವ ಅಥವಾ ಖಾತೆಗಳ ಬದಲಾವಣೆ ಮಾಡುವಂತೆ ಬಹಿರಂಗವಾಗಿ ಕೂಗು ಕೇಳಿಬಂದಿತ್ತು. ಚುನಾವಣೆ ಸಂದರ್ಭ ನಡೆದ ಒಳ ಏಟಿಗೂ ಸಮನ್ವಯದ ಕೊರತೆ ಕಾರಣ ಎಂದು ಸಮಿತಿ ಸಭೆಯಲ್ಲಿ ಬೇಸರ ವ್ಯಕ್ತವಾಗಿತ್ತು. ಅದಕ್ಕೆ ಮುನ್ನ ನಿರೀಕ್ಷಿತ ಸ್ಥಾನ ಗೆಲ್ಲದಿದ್ದರೆ ಸಚಿವರ ತಲೆದಂಡ ಅನಿವಾರ್ಯ ಎಂದು ಹೈಕಮಾಂಡ್ ಎಚ್ಚರಿಕೆ ನೀಡಿತ್ತು. ಅಂದುಕೊಂಡಂತೆ ಎಲ್ಲವೂ ನಡೆದರೆ, ಸೆಪ್ಟಂಬರ್‌ನಲ್ಲೇ ಇದಕ್ಕೆ ಮುಹೂರ್ತ ನಿಗದಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಒತ್ತಡ
ಸಚಿವ ಸಂಪುಟ ಪುನಾರಚನೆಗೆ ಚಿಂತನೆ ನಡೆಯುತ್ತಿರುವ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೂ ಒತ್ತಡ ಹೆಚ್ಚಿದೆ. ಸಿಎಂ ಮತ್ತು ಡಿಸಿಎಂ ಎರಡೂ ಬಣಗಳಿಂದ ಲಾಬಿ ಆರಂಭವಾಗಿದೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ದಿಲ್ಲಿಗೆ ತೆರಳಿದ್ದು, ಅಲ್ಲಿ ಈ ಸಂಬಂಧ ಹೈಕಮಾಂಡ್ ಜತೆಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಮತ್ತೂಂದೆಡೆ ಸಿಎಂ ಬಣದಿಂದ ಸಚಿವರಾದ ಎಚ್.ಸಿ. ಮಹದೇವಪ್ಪ ಮತ್ತು ಸತೀಶ್ ಜಾರಕಿಹೊಳಿ ಕೂಡ ದಿಲ್ಲಿಯಲ್ಲಿ ಹೈಕಮಾಂಡ್ ಭೇಟಿ ಮಾಡಿ, ಈ ನಿಟ್ಟಿನಲ್ಲಿ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ.