ಬೆಳಗಾವಿ: ತಾಲೂಕಿನ ಹಲಗಾದಲ್ಲಿ ಗೃಹಲಕ್ಷ್ಮೀ ಅದಾಲತ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಚಾಲನೆ ನೀಡಿದರು.
ಆ ಬಳಿಕ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆಯ (gruha lakshmi scheme) ಯಾವೊಬ್ಬ ಫಲಾನುಭವಿಗಳೂ ಸಹ ಯೋಜನೆಯಿಂದ ವಂಚಿತರಾಗಬಾರದು.
ಈ ಹಿನ್ನೆಲೆಯಲ್ಲಿ 3 ದಿನಗಳ ಕಾಲ ರಾಜ್ಯದ ಎಲ್ಲ ಗ್ರಾಪಂಗಳಲ್ಲಿ ವಿಶೇಷ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಗ್ರಾಪಂ ಮಟ್ಟದಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಸೂಚನೆಯ ಹಿನ್ನೆಲೆಯಲ್ಲಿ ಡಿ.29 ರವರೆಗೆ ವಿಶೇಷ ಶಿಬಿರಗಳು ರಾಜ್ಯಾದ್ಯಂತ ನಡೆಯಲಿವೆ ಎಂದು ಮಾಹಿತಿ ನೀಡಿದರು.
ಈ ವಿಶೇಷ ಶಿಬಿರದಲ್ಲಿ ಗೃಹಲಕ್ಷ್ಮೀ ಯೋಜನೆಯ ಅನುಷ್ಠಾನದಲ್ಲಿ ಉಂಟಾಗುವ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿ ಸ್ಥಳದಲ್ಲಿಯೇ ಪರಿಹಾರ ನೀಡಲಾಗುವುದು. ಯೋಜನೆಯ ಫಲಾನುಭವಿಗಳಿಗೆ ಏನಾದರೂ ಸಮಸ್ಯೆಗಳಿದ್ದರೆ ನಿಮ್ಮ ವ್ಯಾಪ್ತಿಯ ಗ್ರಾಪಂ ಕಚೇರಿಗೆ ತೆರಳಿ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದರು.
ಬೆಳಗಾವಿ ಜಿಲ್ಲೆಯಲ್ಲಿಯೇ ಸುಮಾರು 11 ಲಕ್ಷ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿದ್ದಾರೆ. ತಿಂಗಳಿಗೆ 202 ಕೋಟಿ ಹಣವನ್ನು ನೀಡಲಾಗುತ್ತಿದೆ. ಹಲಗಾ ಗ್ರಾಮವೊಂದರಲ್ಲಿಯೇ 1600 ಫಲಾನುಭವಿಗಳಿದ್ದಾರೆ. ಹಲಗಾ ಗ್ರಾಮದ ಕೆಲ ಫಲಾನುಭವಿಗಳು ಕಳೆದ ಮೂರು ತಿಂಗಳಿಂದ ಗೃಹಲಕ್ಷ್ಮೀ ಹಣ ಬಂದಿಲ್ಲ ಎಂದು ಸಮಸ್ಯೆ ತೋಡಿಕೊಂಡಿದ್ದಾರೆ ಎಂದರು.
ಕೆಲವರಿಗೆ ಬ್ಯಾಂಕ್ ಖಾತೆಯ ಸಮಸ್ಯೆ ಇದೆ. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿಲ್ಲ, ಕೆವೈಸಿ ಆಗಿಲ್ಲ, ಹೀಗೆ ವಿವಿಧ ತಾಂತ್ರಿಕ ಕಾರಣಗಳಿಂದಾಗಿ ಅವರಿಗೆ ಹಣ ಹೋಗಿಲ್ಲ. ವಿಶೇಷ ಶಿಬಿರದಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದು ಹೇಳಿದರು.
ಗ್ರಾಪಂ ಕಚೇರಿಗೆ ಆಗಮಿಸಿದ್ದ ಹಲವು ಫಲಾನುಭವಿಗಳನ್ನು ಸ್ವತಃ ಭೇಟಿಯಾಗಿ ಸಮಸ್ಯೆ ಆಲಿಸಿದರು. ಸ್ಥಳದಲ್ಲಿಯೇ ಪರಿಹಾರವನ್ನು ಒದಗಿಸಿದರು.