ಯಾದಗಿರಿ: ವಲಸೆ ಕಾರ್ಮಿಕರನ್ನು ಶಾಲೆಯಲ್ಲಿ ಕ್ವಾರಂಟೈನ್ ಮಾಡದಂತೆ ವಿರೋಧಿಸಿ ದಿಢೀರ್ ಪ್ರತಿಭಟನೆ ನಡೆಸಿದ ಸ್ಥಳೀಯರನ್ನು ಪೊಲೀಸರು ಬಲವಂತವಾಗಿ ಚದುರಿಸಿದ ಘಟನೆ ತಡರಾತ್ರಿ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ತಡರಾತ್ರಿ ಮಹಿಳೆಯರು ಮತ್ತು ಸ್ಥಳೀಯರಿಂದ ಈ ಪ್ರತಿಭಟನೆ ನಡೆದಿದೆ. ಪಟ್ಟಣದ ಪೋಸ್ಟ್ ಆಫೀಸ್ ಪಕ್ಕ ಸ.ಹಿ.ಪ್ರಾ ಶಾಲೆಯಲ್ಲಿ ವಲಸೆ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ನಿರ್ಧಾರಿಸಿದೆ. ಆದರೆ ಶಾಲೆಯ ಅಕ್ಕಪಕ್ಕದಲ್ಲಿ ಹೆಚ್ಚು ಜನವಸತಿ ಇರುವ ಹಿನ್ನೆಲೆ ಮತ್ತು ಕೆಲವೊಂದು ಮನೆಗಳು ಶಾಲೆಯ ಗೊಡೆಗೆ ಅಂಟಿಕೊಂಡಿರುವ ಕಾರಣ ಸ್ಥಳೀಯರಿಂದ ಕ್ವಾರಂಟೈನ್‍ಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಸ್ಥಳೀಯ ನಿವಾಸಿಗಳು ರಸ್ತೆಗಳಿಗೆ ಮುಳ್ಳು ಬೇಲಿ ಹಾಕಿ ಅಧಿಕಾರಿಗಳಿಗೆ ನಿರ್ಬಂಧ ಹೇರಲು ಮುಂದಾಗಿದ್ದಾರೆ. ಆದರೆ ಇದು 144 ಸೆಕ್ಷನ್ ಉಲ್ಲಂಘನೆ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರತರನ್ನು ಅಧಿಕಾರಿಗಳು ಬಲವಂತವಾಗಿ ಚದುರಿಸಲು ಮುಂದಾಗಿದ್ದಾರೆ. ಇದರಿಂದಾಗಿ ಹುಣಸಗಿ ತಹಶೀಲ್ದಾರ್ ವಿನಯ್ ಪಾಟೀಲ್ ಮತ್ತು ಸ್ಥಳೀಯ ನಡುವೆ ಮಾತಿನ ಚಕಮಕಿ ನಡೆದಿದೆ.
ಇಲ್ಲಿ ಕ್ವಾರಂಟೈನ್ ಮಾಡಲು ಇನ್ನೂ ನಿರ್ಧಾರ ಮಾಡಿಲ್ಲ. ಇದಕ್ಕೆ ನಿಮ್ಮ ವಿರೋಧ ಇದ್ದರೆ ಖಂಡಿತವಾಗಿ ಇಲ್ಲಿ ಕ್ವಾರಂಟೈನ್ ಕೇಂದ್ರ ಆರಂಭಿಸಲ್ಲ ಎಂದು ಜನರಿಗೆ ವಿನಯ್ ಪಾಟೀಲ್ ತಿಳಿ ಹೇಳಿದರು. ಜನ ಮಾತ್ರ ಅವರ ಮಾತನ್ನು ಕೇಳಿಸಿಕೊಳ್ಳಲಿಲ್ಲ. ಹೀಗಾಗಿ ಬಲವಂತವಾಗಿ ಜನರನ್ನು ಪೊಲೀಸರು ಮತ್ತು ತಹಶೀಲ್ದಾರ್ ಚದುರಿಸಿದ್ದಾರೆ. ಇದರಿಂದಾಗಿ ಹುಣಸಗಿ ಪಟ್ಟಣದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದೆ.