ಲಕ್ನೋ: ಅಂದು ರಾಮಭಕ್ತರ ಮೇಲೆ ಗುಂಡು ಹಾರಿಸಿದವರು ಇಂದು ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ವಿರುದ್ಧ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಯೋಧ್ಯೆಯ ರಾಮಮಂದಿರದ ದೇಣಿಗೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಮಾಡುತ್ತಿರುವ ಭ್ರಷ್ಟಾಚಾರದ ಆರೋಪಗಳ ಬಗ್ಗೆ ತೀಕ್ಷ್ಣ ಪದಗಳಿಂದ ಕಿಡಿಕಾರಿದ್ದಾರೆ.
ಸಮಾಜವಾದಿ ಪಕ್ಷದ ಹಳೇ ಇತಿಹಾಸವನ್ನು ಉಲ್ಲೇಖಿಸಿದ ಯೋಗಿ, ರಾಮ ಜನ್ಮಭೂಮಿ ಚಳವಳಿಯ ಸಂದರ್ಭದಲ್ಲಿ ಯಾರು ಕರಸೇವಕರ ಮೇಲೆ ಲಾಠಿಚಾರ್ಜ್ ನಡೆಸಿ, ಗುಂಡು ಹಾರಿಸುವಂತೆ ಆದೇಶ ನೀಡಿದ್ದರೋ ಮತ್ತು ಪ್ರಭು ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದರೋ, ಅಂತವರು ಇಂದು ಧರ್ಮದ ಹೆಸರಿನಲ್ಲಿ ಉಪದೇಶ ನೀಡುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಹಾಗೂ ಚುನಾವಣಾ ಅನಿವಾರ್ಯತೆಗಾಗಿ ಇವರು ಬಣ್ಣ ಬದಲಾಯಿಸುತ್ತಿದ್ದಾರೆ ಎಂದು ಟೀಕಿಸಿದರು.
ಪ್ರತಿಪಕ್ಷಗಳು ಭಾರತದ ಅಸ್ಮಿತೆ ಹಾಗೂ ಧರ್ಮದ ಮೇಲೆ ದಾಳಿ ಮಾಡಲು ಸುಪಾರಿ ತೆಗೆದುಕೊಂಡಿವೆ. ತನಿಖೆ ಮುಗಿಯುವ ಮುನ್ನವೇ ಇಡೀ ಟ್ರಸ್ಟ್ ಅನ್ನು ದೂಷಿಸುವುದು, ಅಯೋಧ್ಯೆಯನ್ನು ಮತ್ತು ಶ್ರೀರಾಮನ ಪರಂಪರೆಯನ್ನು ಅವಮಾನಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ದೇಣಿಗೆ ವಿಚಾರದಲ್ಲಿ ಕೇಳಿಬಂದಿರುವ ಆರೋಪಗಳ ಕುರಿತು ಈಗಾಗಲೇ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡವನ್ನು ರಚಿಸಿದೆ. ಯಾರ ಬಳಿಯಾದರೂ ಸೂಕ್ತ ಸಾಕ್ಷ್ಯಾಧಾರಗಳಿದ್ದರೆ ಅದನ್ನು ಎಸ್‌ಐಟಿಗೆ ಸಲ್ಲಿಸಲಿ. ತನಿಖಾ ವರದಿ ಬರುವವರೆಗೂ ರಾಮಭಕ್ತರ ಭಾವನೆಗಳಿಗೆ ಧಕ್ಕೆ ತರುವಂತಹ ಸುಳ್ಳು ವದಂತಿಗಳನ್ನು ಹರಡಬಾರದು. ಒಂದು ವೇಳೆ ಯಾರಾದರೂ ತಪ್ಪಿತಸ್ಥರಾಗಿ ಕಂಡುಬಂದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದರು.
ಅಯೋಧ್ಯೆಯ ಭವ್ಯ ಅಭಿವೃದ್ಧಿಯನ್ನು ಸಹಿಸಲಾಗದೆ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಹತಾಶೆಯಿಂದ ಸುಳ್ಳು ಕಟ್ಟುಕಥೆಗಳನ್ನು ಸೃಷ್ಟಿಸುತ್ತಿವೆ ಎಂದು ಯುಪಿ ಸಿಎಂ ಆರೋಪಿಸಿದರು.
Laxmi News 24×7