Breaking News

ಪಿಎಂ ಕೇರ್ಸ್ ಖಾತೆಯಲ್ಲಿದೆ 8,452 ಕೋಟಿ – ಈ ಪೈಕಿ ಎಫ್‌ಡಿಯಲ್ಲಿದೆ 7,846 ಕೋಟಿ!

Spread the love

ನವದೆಹಲಿ: ಕೋವಿಡ್‌ನಂತಹ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು 2020ರಲ್ಲಿ ಸ್ಥಾಪಿಸಲಾದ ಪಿಎಂ ಕೇರ್ಸ್  ನಿಧಿಯಲ್ಲಿ ಸದ್ಯ ಒಟ್ಟು 8,452 ಕೋಟಿ ರೂ. ಹಣವಿದೆ ಎಂದು ಇತ್ತೀಚಿನ ಆಡಿಟ್ ವರದಿ ತಿಳಿಸಿದೆ.

ಹಿಂದಿನ ಆರ್ಥಿಕ ವರ್ಷದಲ್ಲಿ (2023-24) ಈ ಮೊತ್ತವು 7,188.63 ಕೋಟಿ ರೂ. ಆಗಿತ್ತು. ಇದಕ್ಕೆ ಹೋಲಿಸಿದರೆ 2024-25 ಸಾಲಿನಲ್ಲಿ ನಿಧಿಯ ಒಟ್ಟು ಮೊತ್ತದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಈ ನಿಧಿಗೆ 2024ರ ಹಣಕಾಸು ವರ್ಷದಲ್ಲಿ 681.81 ಕೋಟಿ ರೂ. ದೇಶೀಯ ದೇಣಿಗೆ ಬಂದರೆ 2025 ರಲ್ಲಿ ಇದು 479.05 ಕೋಟಿ ರೂ.ಗೆ ಇಳಿದಿದೆ. ವಿದೇಶಿ ದೇಣಿಗೆ ಕೂಡ ಈ ಅವಧಿಯಲ್ಲಿ 11.35 ಲಕ್ಷ ರೂ. ನಿಂದ 9.28 ಲಕ್ಷ ರೂ.ಗೆ ಕುಸಿದಿದೆ.

ಪಿಎಂ ಕೇರ್ಸ್ (PM-CARES) ನಿಧಿಗೆ 2023-24 ಮತ್ತು 2024-25ರ ಆರ್ಥಿಕ ವರ್ಷಗಳಲ್ಲಿ ದೇಶ ಹಾಗೂ ವಿದೇಶಗಳಿಂದ 1,162.92 ಕೋಟಿ ರೂ. ದೇಣಿಗೆ ಹರಿದುಬಂದಿದೆ. ಆದರೆ ಈ ಎರಡು ವರ್ಷಗಳ ಅವಧಿಯಲ್ಲಿ ಕೇವಲ 16.47 ಕೋಟಿ ರೂ. ಬಳಕೆ ಮಾಡಿರುವ ವಿಚಾರ ಆಡಿಟ್ ವರದಿಯಿಂದ ಬೆಳಕಿಗೆ ಬಂದಿದೆ.

2025ರ ಮಾರ್ಚ್ 31ಕ್ಕೆ ಅಂತ್ಯಗೊಂಡ ಆರ್ಥಿಕ ವರ್ಷದ ಲೆಕ್ಕಪತ್ರದ ಪ್ರಕಾರ, ಪಿಎಂ ಕೇರ್ಸ್ ಖಾತೆಯಲ್ಲಿ ಪ್ರಸ್ತುತ 8,452.06 ಕೋಟಿ ರೂ. ಹಣವಿದೆ. ಇದರಲ್ಲಿ 7,846.65 ಕೋಟಿ ರೂ. ಮೊತ್ತವನ್ನು ಫಿಕ್ಸೆಡ್‌ ಠೇವಣಿ ರೂಪದಲ್ಲಿ ಇರಿಸಲಾಗಿದೆ. ಈ ಸ್ಥಿರ ಠೇವಣಿಗಳಿಂದ ಗಳಿಸಿದ ಬಡ್ಡಿ ವರ್ಷದಲ್ಲಿ 469.38 ಕೋಟಿ ರೂ.ಗಳಾಗಿದ್ದು, ಇದು ನಿಧಿಯ ಅತಿದೊಡ್ಡ ಆದಾಯದ ಮೂಲವಾಗಿದೆ.

ಯಾವ ವರ್ಷ ಎಷ್ಟು?
2024-25 –> 479.97 ಕೋಟಿ ದೇಣಿಗೆ ಸಂಗ್ರಹವಾಗಿದ್ದು, ಕೋವಿಡ್‌ಗೆ ಪೋಷಕರನ್ನು ಕಳೆದುಕೊಂಡ ಮಕ್ಕಳಿಗಾಗಿ 87.85 ಲಕ್ಷ ರೂ. ವ್ಯಯಿಸಲಾಗಿದೆ.

2023-24 –> 682.94 ಕೋಟಿ ದೇಣಿಗೆ ಹರಿದುಬಂದಿದ್ದು, ಒಟ್ಟು 15.59 ಕೋಟಿ ರೂ. ಖರ್ಚು ಮಾಡಲಾಗಿದೆ.

2022-23 –> 912.21 ಕೋಟಿ ರೂ. ದೇಣಿಗೆ ಸಂಗ್ರಹವಾಗಿ, 439.38 ಕೋಟಿ ರೂ. ಖರ್ಚು ಮಾಡಲಾಗಿತ್ತು. ಇದರಲ್ಲಿ ಕೋವಿಡ್‌ನಿಂದ ಅನಾಥರಾದ ಮಕ್ಕಳಿಗೆ 346 ಕೋಟಿ ರೂ. ಹಾಗೂ ಸುಮಾರು 1 ಲಕ್ಷ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳ ಖರೀದಿಗೆ 91.87 ಕೋಟಿ ರೂ. ವಿನಿಯೋಗಿಸಲಾಗಿತ್ತು.

ಕೋವಿಡ್-19 ಸಾಂಕ್ರಾಮಿಕದ ನಡುವೆ 2020ರ ಮಾರ್ಚ್ 27ರಂದು ಪ್ರಧಾನ ಮಂತ್ರಿಗಳ ಅಧ್ಯಕ್ಷತೆಯಲ್ಲಿ ‘ಪ್ರೈಮ್ ಮಿನಿಸ್ಟರ್ಸ್ ಸಿಟಿಜನ್ ಅಸಿಸ್ಟೆನ್ಸ್ ಅಂಡ್ ರಿಲೀಫ್ ಇನ್ ಎಮರ್ಜೆನ್ಸಿ ಸಿಚುಯೇಷನ್ಸ್’ (PM-CARES) ನಿಧಿಯನ್ನು ಸ್ಥಾಪಿಸಲಾಯಿತು.

ಈ ನಿಧಿ ಸ್ಥಾಪನೆಯಾದಾಗಿನಿಂದ 2024-25ರವರೆಗೆ ನಿಧಿಗೆ ಒಟ್ಟು 14,766.95 ಕೋಟಿ ರೂ. ದೇಣಿಗೆ ಬಂದಿದೆ. ಈ ಪೈಕಿ ಒಟ್ಟು 8,133.29 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಹೆಚ್ಚಿನ ಮೊತ್ತವನ್ನು ಕೊರೊನಾ ಉತ್ತುಂಗದ ಸಂದರ್ಭದಲ್ಲೇ ಖರ್ಚು ಮಾಡಲಾಗಿದೆ.

2020-21ರಲ್ಲಿ ಅತಿ ಹೆಚ್ಚು ಅಂದರೆ 7,678.68 ಕೋಟಿ ದೇಣಿಗೆ ಹರಿದುಬಂದಿದ್ದು, 3,976.17 ಕೋಟಿ ಖರ್ಚಾಗಿತ್ತು. 2021-22ರಲ್ಲಿ 1,936.88 ಕೋಟಿ ರೂ. ದೇಣಿಗೆ ಸಂಗ್ರಹವಾಗಿ, 3,716.29 ಕೋಟಿ ರೂ. ವ್ಯಯಿಸಲಾಗಿತ್ತು. ಕೋವಿಡ್ ಸಾಂಕ್ರಾಮಿಕ ಮುಗಿದ ನಂತರ ಪಿಎಂ ಕೇರ್ಸ್ ನಿಧಿಗೆ ಬರುತ್ತಿರುವ ದೇಣಿಗೆ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ.


Spread the love

About Laxminews 24x7

Check Also

ಬಿಡದಿ ಟೌನ್‌ಶಿಪ್, ನೈಸ್ ವಿರುದ್ಧ ದಳಪತಿ ಕಹಳೆ – ಸರ್ಕಾರದ ವಿರುದ್ಧ ಜೆಡಿಎಸ್ ನಾಯಕರು ಕೆಂಡ

Spread the loveಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆ, ನೈಸ್ ರೋಡ್ ಟೋಲ್ ವಿರೋಧಿಸಿ ಫ್ರೀಡಂಪಾರ್ಕ್‌ನಲ್ಲಿ  ಇಂದು (ಆ.18) ಜೆಡಿಎಸ್  ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ