Breaking News

ಹನೂರು ಎನ್‌ಕೌಂಟರ್‌; ಮೃತರ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರ, ಸರ್ಕಾರಿ ಉದ್ಯೋಗ ನೀಡಬೇಕು: ವಿಜಯೇಂದ್ರ

Spread the love

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ಬಳಿ ನಡೆದ ಅರಣ್ಯ ಎನ್‌ಕೌಂಟರ್‌  ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.

ಕೇವಲ ಮ್ಯಾಜಿಸ್ಟ್ರೇಟ್‌ ತನಿಖೆಗೆ ಸೀಮಿತವಾಗದೆ ಜುಡಿಷಿಯಲ್‌ ತನಿಖೆ ನಡೆಸಿ ಸತ್ಯವನ್ನು ಜನರ ಮುಂದೆ ತರಬೇಕು ಎಂದು ಒತ್ತಾಯಿಸಿದ್ದಾರೆ.

ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಮೂವರ ಕುಟುಂಬಗಳಿಗೆ ಮಾನವೀಯತೆಯ ಆಧಾರದ ಮೇಲೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕು. ಅಲ್ಲದೆ, ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಬಿಜೆಪಿ ಹಾಗೂ ಜೆಡಿಎಸ್‌ ಸದನದ ಆರಂಭದ ದಿನದಿಂದಲೂ ಈ ಬೇಡಿಕೆಯನ್ನು ಮುಂದಿಟ್ಟಿವೆ ಎಂದು ತಿಳಿಸಿದ್ದಾರೆ.

ಮೃತರು ಯಾವ ಧರ್ಮಕ್ಕೆ ಸೇರಿದವರು ಎಂಬುದನ್ನು ನೋಡದೆ ಸರ್ಕಾರ ಪರಿಹಾರ ಹಾಗೂ ನ್ಯಾಯ ನೀಡಬೇಕು. ಪ್ರಕರಣಕ್ಕೆ ಜಾತಿ ಅಥವಾ ಧರ್ಮದ ಬಣ್ಣ ನೀಡುವುದು ಸರಿಯಲ್ಲ. ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ನ್ಯಾಯ ಒದಗಿಸುವುದು ಸರ್ಕಾರದ ಜವಾಬ್ದಾರಿ ಎಂದು ಹೇಳಿದ್ದಾರೆ.

ಎನ್‌ಕೌಂಟರ್‌ ಬಗ್ಗೆ ತನಿಖೆಯಾಗಲಿ
ಮೃತರು ಬೇಟೆಗೆ ಹೋಗಿದ್ದರು ಎಂಬ ಆರೋಪವಿದ್ದರೆ ಅದರ ಸತ್ಯಾಸತ್ಯತೆಯನ್ನು ತನಿಖೆಯಿಂದ ತಿಳಿಯಲಿ. ಆದರೆ ಬೇಟೆಗೆ ಹೋಗಿದ್ದರು ಎಂಬ ಆರೋಪವಿದೆ ಎಂಬ ಕಾರಣಕ್ಕೆ ಎನ್‌ಕೌಂಟರ್‌ ಮಾಡಬಹುದೇ ಎಂಬ ಪ್ರಶ್ನೆಗೆ ಸರ್ಕಾರ ಉತ್ತರಿಸಬೇಕು ಎಂದು ಪ್ರಶ್ನಿಸಿದ್ದಾರೆ.

ಅಧಿಕಾರಿಗಳು ಅವರನ್ನು ಸುತ್ತುವರಿದಿದ್ದರು ಹಾಗೂ ಅವರ ಬಳಿ ಟಾರ್ಚ್‌ ಇತ್ತು ಎಂಬ ಮಾಹಿತಿಯೂ ಇದೆ. ಬೆಳಗಿನ ಜಾವ ಕತ್ತಲಿನ ಪರಿಸ್ಥಿತಿಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಬೇರೆ ಕಾನೂನುಬದ್ಧ ಮಾರ್ಗಗಳಿರಲಿಲ್ಲವೇ ಎಂಬುದನ್ನೂ ತನಿಖೆ ಮಾಡಬೇಕು. ಅರಣ್ಯ ಅಧಿಕಾರಿಗಳು ತಮ್ಮ ಅಧಿಕಾರವನ್ನು ಕಾನೂನುಬದ್ಧವಾಗಿ ಬಳಸಿದ್ದಾರೆಯೇ ಅಥವಾ ಕರ್ತವ್ಯದಲ್ಲಿ ಲೋಪ ಎಸಗಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ತಪ್ಪಿತಸ್ಥರು ಅಧಿಕಾರಿಗಳಾಗಿದ್ದರೂ ಅಥವಾ ಬೇರೆ ಯಾರೇ ಆಗಿದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕಾಡಂಚಿನ ಜನರು ಹಾಗೂ ಅರಣ್ಯ ಇಲಾಖೆ ನಡುವೆ ಹಲವು ಕಡೆ ಸಂಘರ್ಷದ ವಾತಾವರಣವಿದೆ. ಕೊಡಗು, ಮಡಿಕೇರಿ, ಶಿವಮೊಗ್ಗ, ಮಲೆನಾಡು, ಉತ್ತರ ಕನ್ನಡ ಹಾಗೂ ಕರಾವಳಿ ಭಾಗಗಳಲ್ಲೂ ಮಾನವ–ವನ್ಯಜೀವಿ ಸಂಘರ್ಷದ ಸಮಸ್ಯೆ ಇದೆ. ಹೀಗಾಗಿ ಹನೂರು ಘಟನೆ ಬಗ್ಗೆ ಸಂಪೂರ್ಣ ಸತ್ಯ ಹೊರಬರುವುದು ಅಗತ್ಯ ಎಂದು ಹೇಳಿದ್ದಾರೆ.

ಹಿಂದಿನ ಘಟನೆಗಳ ಬಗ್ಗೆಯೂ ತನಿಖೆ ನಡೆಯಲಿ
ಯಾವ ಸರ್ಕಾರದ ಅವಧಿಯಲ್ಲಿ ಘಟನೆ ನಡೆದಿದೆ ಎಂಬುದು ಮುಖ್ಯವಲ್ಲ. ತಪ್ಪು ಯಾರಿಂದ ಆಗಿದ್ದರೂ ತನಿಖೆ ನಡೆಯಬೇಕು. ಹಿಂದಿನ ಸರ್ಕಾರಗಳ ಅವಧಿಯಲ್ಲೂ ಇಂತಹ ಘಟನೆಗಳು ನಡೆದಿದ್ದರೆ ಅವುಗಳ ಬಗ್ಗೆಯೂ ತನಿಖೆ ನಡೆಸಲಿ. ಆದರೆ ಹಿಂದಿನ ಘಟನೆಗಳನ್ನು ಮುಂದಿಟ್ಟುಕೊಂಡು ಈಗಿನ ಪ್ರಕರಣದ ಹೊಣೆಗಾರಿಕೆಯಿಂದ ಸರ್ಕಾರ ನುಣುಚಿಕೊಳ್ಳಬಾರದು ಎಂದು ಹೇಳಿದ್ದಾರೆ.

KPSC ಅಕ್ರಮಕ್ಕೆ CBI ತನಿಖೆಗೆ ಆಗ್ರಹ
ಇದೇ ವೇಳೆ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕಚೇರಿ ಮೇಲೆ ನಡೆದಿರುವ ದಾಳಿಯನ್ನು ಬಿಜೆಪಿ ಸ್ವಾಗತಿಸುತ್ತದೆ ಎಂದು ವಿಜಯೇಂದ್ರ ಹೇಳಿದ್ದಾರೆ. ಕೆಪಿಎಸ್‌ಸಿಯಲ್ಲಿ ಪರೀಕ್ಷೆಗಳು ಹಾಗೂ ಫಲಿತಾಂಶ ಪ್ರಕಟಿಸುವುದು ವಿಳಂಬವಾಗುತ್ತಿದೆ. ಸಂದರ್ಶನ ಪ್ರಕ್ರಿಯೆಯಲ್ಲೂ ವಿಳಂಬವಾಗುತ್ತಿದ್ದು, ಇದರಿಂದ ಲಕ್ಷಾಂತರ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಕೆಪಿಎಸ್‌ಸಿ ಅಧ್ಯಕ್ಷರು ಅಥವಾ ಸದಸ್ಯರನ್ನು ಯಾವ ಸರ್ಕಾರ ನೇಮಕ ಮಾಡಿತ್ತು ಎಂಬುದು ಮುಖ್ಯವಲ್ಲ. ಅಕ್ರಮ ನಡೆದಿದ್ದರೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಈ ಹಿನ್ನೆಲೆಯಲ್ಲಿ ಕೆಪಿಎಸ್‌ಸಿ ಅಕ್ರಮಗಳ ಕುರಿತು ರಾಜ್ಯ ಸರ್ಕಾರ ಕೂಡಲೇ CBI ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದ್ದಾರೆ.

ಹನೂರು ಎನ್‌ಕೌಂಟರ್‌ಗೆ ಜುಡಿಷಿಯಲ್‌ ತನಿಖೆ, ಮೃತರ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ಹಾಗೂ ಒಬ್ಬರಿಗೆ ಸರ್ಕಾರಿ ಉದ್ಯೋಗ, ಕೆಪಿಎಸ್‌ಸಿ ಅಕ್ರಮಗಳ ಕುರಿತು CBI ತನಿಖೆ—ಈ ಮೂರು ಪ್ರಮುಖ ಬೇಡಿಕೆಗಳ ಬಗ್ಗೆ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ವಿಜಯೇಂದ್ರ ಹೇಳಿದ್ದಾರೆ.


Spread the love

About Laxminews 24x7

Check Also

ಬಿಡದಿ ಟೌನ್‌ಶಿಪ್, ನೈಸ್ ವಿರುದ್ಧ ದಳಪತಿ ಕಹಳೆ – ಸರ್ಕಾರದ ವಿರುದ್ಧ ಜೆಡಿಎಸ್ ನಾಯಕರು ಕೆಂಡ

Spread the loveಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆ, ನೈಸ್ ರೋಡ್ ಟೋಲ್ ವಿರೋಧಿಸಿ ಫ್ರೀಡಂಪಾರ್ಕ್‌ನಲ್ಲಿ  ಇಂದು (ಆ.18) ಜೆಡಿಎಸ್  ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ