ಚೆನ್ನೈ: ಸಿಡಬ್ಲ್ಯೂಆರ್‌ಸಿ ಆದೇಶ, ರಾಜ್ಯದಲ್ಲಿ ಕಾವೇರಿ ಹೋರಾಟದ ಮಧ್ಯೆಯೂ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಇದೇ ಮುಂದಿನ ಸೋಮವಾರ ಬೆಂಗಳೂರಿಗೆ ಬರಲಿದ್ದಾರೆ. ಕಾವೇರಿ ನೀರು-ಮೇಕೆದಾಟು ಡ್ಯಾಮ್ ವಿಚಾರವಾಗಿ ವಿಧಾನಸೌಧದಲ್ಲಿ ಸಿಎಂ ಡಿಕೆ ಶಿವಕುಮಾರ್ ಜೊತೆ ಪರಸ್ಪರ ಚರ್ಚೆ ಮಾಡಲಿದ್ದಾರೆ.
ಬೆಂಗಳೂರಿಗೆ ಬರಲು ಪ್ರೈವೆಟ್ ಜೆಟ್ ಸಿದ್ಧಗೊಳಿಸಿರುವ ಸಿಎಂ ವಿಜಯ್‌ಗೆ ಜಲಸಂಪನ್ಮೂಲ ಖಾತೆ ಸಚಿವ ಎನ್.ಆನಂದ್, ಕೃಷಿ ಸಚಿವ ಆರ್.ವಿನೋದ್ ಸಾಥ್ ಕೊಡುವ ಸಾಧ್ಯತೆ ಇದೆ. ವಿಧಾನಸೌಧದಲ್ಲಿ ಚರ್ಚೆಗೂ ಮೊದಲು ಸಿಎಂ ವಿಜಯ್‌ಗೆ ಕಾವೇರಿ ಕೊಳ್ಳದ ಜಲಾನಯನ ಪ್ರದೇಶಗಳ ವೈಮಾನಿಕ ದರ್ಶನ ಮಾಡಿಸಲು ಸಿಎಂ ಡಿಕೆಶಿ ಕೂಡ ಸಿದ್ಧತೆ ನಡೆಸಿದ್ದಾರೆ.
ಇನ್ನು, ತಮಿಳುನಾಡು ಸಿಎಂ ಬೆಂಗಳೂರಿಗೆ ಬರುತ್ತಿರುವ ಹೊತ್ತಲ್ಲೇ ಆಗಸ್ಟ್ 3ರಂದು ಬೆಳಗ್ಗೆ 10 ಗಂಟೆಗೆ ತಂಜಾವೂರಿನಲ್ಲಿ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಅಂತ ಡಿಎಂಕೆ ನಾಯಕ, ಮಾಜಿ ಸಿಎಂ ಸ್ಟಾಲಿನ್ ಕರೆ ನೀಡಿದ್ದಾರೆ.
ನೀರು ಹರಿಸುವ ಆದೇಶವನ್ನು ಕರ್ನಾಟಕ ಉಲ್ಲಂಘಿಸಿದೆ. ಮೇಕೆದಾಟು ಡ್ಯಾಮ್‌ಗೆ ನಿಮ್ಮ ಅನುಮತಿ ಅಗತ್ಯ ಇಲ್ಲ ಅಂತಿದ್ದಾರೆ. ಹೀಗಿದ್ದರೂ, ಕರ್ನಾಟಕದ ಜೊತೆ ಚರ್ಚೆ ಏಕೆ? ಸರ್ವಪಕ್ಷ ಸಭೆ ನಡೆಸದೇ, ರೈತರ ಅಭಿಪ್ರಾಯ ಪಡೆಯದೇ ಹೋಗುತ್ತಿರುವುದು ಸರಿಯಲ್ಲ. ಇದು ಮೇಕೆದಾಟು ವಿಷಯದಲ್ಲಿ ತಮಿಳುನಾಡಿನ ದಾರಿತಪ್ಪಿಸುವ ನಡೆಯಲಾಗಲಿದೆ ಅಂತ ಸ್ಟಾಲಿನ್ ಟೀಕಿಸಿದ್ದಾರೆ. ಈ ಮಧ್ಯೆ, ವಿಜಯ್ ಭೇಟಿ ವೇಸ್ಟ್ ಅಂತ ವಿಪಕ್ಷ ನಾಯಕ ಅಶೋಕ್ ಹೇಳಿದರೆ, ಇದೊಂದು ಒಳ್ಳೆಯ ಬೆಳವಣಿಗೆ ಅಂತ ಕಾಂಗ್ರೆಸಿಗರು ಹೇಳುತ್ತಿದ್ದಾರೆ.
Laxmi News 24×7