Breaking News

ಪೇಪರ್ ಲೀಕ್‌ ತಡೆಗೆ ಕಠೋರ ಕಾನೂನು – ಇಂದು ಲೋಕಸಭೆಯಲ್ಲಿ ಮಸೂದೆ ಮಂಡನೆ?

Spread the love

ನವದೆಹಲಿ: ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ವಿವಾದ ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆ ತಣ್ಣಗಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗ ತನ್ನ ಪ್ರಮುಖ ಶಾಸನಾತ್ಮಕ ಆದ್ಯತೆಗಳತ್ತ ಗಮನಹರಿಸುತ್ತಿದೆ.

ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಿದ ಬಳಿಕ ಹೌದು. ಕಾಕ್ರೋಚ್‌ ಜನತಾ ಪಾರ್ಟಿ  ತನ್ನ ಪ್ರತಿಭಟನೆ ಹಿಂಪಡೆದುಕೊಂಡಿದೆ. ಇದಾದ ಒಂದು ದಿನದ ನಂತರ, ಪ್ರಧಾನಿ ಮೋದಿ ಅವರು ಇನ್ಫೋಸಿಸ್ ಸಹ-ಸ್ಥಾಪಕ, ವಿಶ್ವಪ್ರಸಿದ್ಧ ತಂತ್ರಜ್ಞಾನ ತಜ್ಞ ನಂದನ್ ನಿಲೇಕಣಿ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಪರೀಕ್ಷಾ ಸುಧಾರಣಾ ಕಾರ್ಯಪಡೆ ರಚಿಸುವುದಾಗಿ ಘೋಷಿಸಿದ್ದಾರೆ. ಜೊತೆಗೆ, ಪೇಪರ್ ಲೀಕ್ ವಿರುದ್ಧದ ಕಾನೂನನ್ನ ಮತ್ತಷ್ಟು ಬಲಪಡಿಸುವ ತಿದ್ದುಪಡಿಗಳನ್ನು ಸಂಸತ್ತಿನಲ್ಲಿ ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ.

ವರದಿಗಳ ಪ್ರಕಾರ, ನೀಟ್‌ ಪ್ರಶ್ನೆಪತ್ರಿಕೆ ವಿವಾದದ ತಣ್ಣಗಾದ ಬೆನ್ನಲ್ಲೇ ಸಾರ್ವಜನಿಕ ಪರೀಕ್ಷೆ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026 ಅನ್ನು ಸೋಮವಾರ ಲೋಕಸಭೆಯಲ್ಲಿ ಇಂದಿನ ಅಧಿವೇಶನದಲ್ಲಿ ಮಂಡಿಸಲು ಸಕಲ ತಯಾರಿ ನಡೆದಿದೆ. ಇದರೊಂದಿಗೆ ಮಹಿಳಾ ಮೀಸಲಾತಿ ಕಾನೂನು ಜಾರಿಗೆ ತರುವುದು ಹಾಗೂ ರಾಜಕೀಯವಾಗಿ ಸೂಕ್ಷ್ಮವಾದ ಕ್ಷೇತ್ರ ಮರುವಿಂಗಡಣೆ  ಪ್ರಕ್ರಿಯೆಯಂತಹ ಬಾಕಿ ಉಳಿದಿರುವ ಸಾಂವಿಧಾನಿಕ ಕಾರ್ಯಸೂಚಿಗಳತ್ತ ಸರ್ಕಾರ ಗಮನ ಹರಿಸಲು ಉದ್ದೇಶಿಸಿದೆ. ಈ ಎರಡೂ ವಿಷಯಗಳಿಗೆ ಸಂವಿಧಾನ ತಿದ್ದುಪಡಿ ತರಲು ಸರ್ಕಾರ ಸಕಲ ತಯಾರಿ ಮಾಡಿಕೊಳ್ಳುತ್ತಿದೆ.

ಸರ್ಕಾರಿ ಉನ್ನತ ಅಧಿಕಾರಿಗಳ ಪ್ರಕಾರ, ವಿದ್ಯಾರ್ಥಿಗಳ ಪ್ರತಿಭಟನೆಗಳಿಂದ ಸರ್ಕಾರದ ಈ ಕಾರ್ಯಯೋಜನೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಮೊದಲು ರಾಜಕೀಯವಾಗಿ ದೊಡ್ಡ ಮಟ್ಟಕ್ಕೆ ಬೆಳೆಯುವ ಸಾಧ್ಯತೆ ಇದ್ದ ಯುವಜನರ ಪ್ರತಿಭಟನೆಯನ್ನ ನಿಯಂತ್ರಿಸುವುದು, ಅವರ ಪ್ರಮುಖ ಬೇಡಿಕೆಗಳಿಗೆ ರಾಜಕೀಯ ಹಾಗೂ ನೀತಿ ಕ್ರಮಗಳ ಮೂಲಕ ಸ್ಪಂದಿಸುವುದು, ಬಳಿಕ ಮಳೆಗಾಲದ ಸಂಸತ್ ಅಧಿವೇಶನದಲ್ಲಿ ತನ್ನ ಪ್ರಮುಖ ಸುಧಾರಣಾ ಕಾರ್ಯಸೂಚಿಗಳನ್ನ ಮುಂದುವರಿಸುವುದೇ ಕೇಂದ್ರದ ತಂತ್ರವಾಗಿತ್ತು. ಇದರೊಂದಿಗೆ ಯಾವುದೇ ವಿಳಂಬವಿಲ್ಲದೇ, ಪ್ರಧಾನಿಗಳ ಭರವಸೆಯಂತೆ ಮಹಿಳಾ ಮೀಸಲಾತಿ ತಿದ್ದಿಪಡಿ ಮಸೂದೆ ಜಾರಿಗೊಳಿಸುವುದು ನಮ್ಮ ಪ್ರಮುಖ ಆದ್ಯತೆ ಎಂದು ತಿಳಿಸಿದ್ದಾರೆ.

ಪರೀಕ್ಷಾ ಅಕ್ರಮ ತಡೆ ಮಸೂದೆ ಯಾರು ಮಂಡಿಸುತ್ತಾರೆ?
ಸಾರ್ವಜನಿಕ ಪರೀಕ್ಷೆ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026 ಅನ್ನು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಮಸೂದೆಯನ್ನ ಸದನದಲ್ಲಿ ಮಂಡಿಸಲಿದ್ದಾರೆ. ಇದನ್ನು ಪರಿಚಯಿಸಿದ ನಂತರ, ಸರ್ಕಾರವು ಅದರ ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ಒಂದು ಪ್ರಸ್ತಾವನೆಯನ್ನು ಸಹ ಮಂಡಿಸಲಿದೆ.

ಮಸೂದೆಯ ಉದ್ದೇಶ ಏನು?
ಸಾರ್ವಜನಿಕ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ವಂಚನೆ ಮತ್ತು ಇತರ ಅನ್ಯಾಯದ ಕ್ರಮಗಳನ್ನ ತಡೆಯಲು ಮೂಲ ಶಾಸನವನ್ನು ಜಾರಿಗೆ ತರಲಾಗಿದೆ.

ಇದರೊಂದಿಗೆ, ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ ಮಸೂದೆ, 2026 ಅನ್ನು ಚರ್ಚಿಸಲು ಮತ್ತು ಅಂಗೀಕರಿಸುವ ಕೆಲಸವೂ ಆಗಲಿದೆ. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಈ ಮಸೂದೆಯನ್ನ ಸದನದಲ್ಲಿ ಮಂಡಿಸಲಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಧೀಶರ ಸಂಖ್ಯೆಯ ಬಗ್ಗೆ ನಿಬಂಧನೆಗಳನ್ನ ತಿದ್ದುಪಡಿ ಮಾಡುವುದು ಇದರ ಉದ್ದೇಶವಾಗಿದೆ.

ಮಸೂದೆ ಚರ್ಚಿಸಲು ಯುವ ಸಂಸದರ ಪಟ್ಟಿ – ಯಾರೆಲ್ಲಾ ಇದ್ದಾರೆ?
ಇನ್ನೂ ಪರೀಕ್ಷಾ ಅಕ್ರಮ ತಡೆಗೆ ಸಂಬಂಧಪಟ್ಟ ಮಹತ್ವದ ಮಸೂದೆಯ ಕುರಿತು ಸುಮಾರು 8 ರಿಂದ 10 ಗಂಟೆಗಳ ಕಾಲ ಚರ್ಚೆ ನಡೆಯುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿದೆ. NDA ತನ್ನ ಯುವ ಸಂಸದರನ್ನು ಚರ್ಚೆಯಲ್ಲಿ ಪ್ರಮುಖವಾಗಿ ಸೇರಿಸಲು ಕಾರ್ಯತಂತ್ರ ರೂಪಿಸಿದೆ ಮತ್ತು ಸರ್ಕಾರವನ್ನು ಪ್ರತಿನಿಧಿಸುವ ಬಹುಪಾಲು ಭಾಷಣಕಾರರು ಯುವ ಸಂಸದರಾಗಿರುತ್ತಾರೆ.

ಬಿಜೆಪಿ ಪರವಾಗಿ ಬಾನ್ಸುರಿ ಸ್ವರಾಜ್ ಮತ್ತು ತೇಜಸ್ವಿ ಸೂರ್ಯ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ. ಏತನ್ಮಧ್ಯೆ, ಸಾಯೋನಿ ಘೋಷ್, ಮಿತಾಲಿ ಬಾಗ್, ಲಾವು ಶ್ರೀ ಕೃಷ್ಣ ದೇವರಾಯಲು, ಲಲ್ಲನ್ ಸಿಂಗ್, ಡಾ. ಶ್ರೀಕಾಂತ್ ಶಿಂಧೆ, ಸುನಿಲ್ ತತ್ಕರೆ, ಅನುಪ್ರಿಯಾ ಪಟೇಲ್ ಮತ್ತು ಅರುಣ್ ಭಾರ್ತಿ ಸೇರಿದಂತೆ ಮಿತ್ರ ಪಕ್ಷಗಳ ಹಲವಾರು ಸಂಸದರು ಮಾತನಾಡುವ ನಿರೀಕ್ಷೆಯಿದೆ. ಹೆಚ್ಚುವರಿಯಾಗಿ, ಹೊಸ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ‌ಸಹ ಇಂದು ಮೊದಲ ಬಾರಿಗೆ ಪ್ರಶ್ನೋತ್ತರ ಅವಧಿಯಲ್ಲಿ ಶಿಕ್ಷಣ ಸಚಿವಾಲಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಅಧಿವೇಶನಕ್ಕೆ ತಯಾರಿ ನಡೆಸಲು ಸಚಿವಾಲಯದ ಅಧಿಕಾರಿಗಳು ಭಾನುವಾರ ಅವರಿಗೆ ವಿವರವಾದ ಬ್ರೀಫಿಂಗ್ ನೀಡಿದ್ದಾರೆ.


Spread the love

About Laxminews 24x7

Check Also

ಧುಮ್ಮಿಕ್ಕುತ್ತಿರುವ ʻಜೋಗದ ಸಿರಿʼಯನ್ನು ಕಣ್ತುಂಬಿಕೊಂಡ ಸಾವಿರಾರು ಪ್ರವಾಸಿಗರು

Spread the loveಶಿವಮೊಗ್ಗ: ಶರಾವತಿ ಕಣಿವೆ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ಈ ಹಿನ್ನೆಲೆ ಶರಾವತಿ ನದಿಗೆ ಭಾರೀ ಪ್ರಮಾಣದ ನೀರು ಹರಿದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ