Breaking News

ಇನ್ಮುಂದೆ ಫುಟ್‌ಪಾತ್‌ನಲ್ಲಿ ಬೈಕ್ ಚಲಾಯಿಸಿದ್ರೆ 5,000 ರೂ. ದಂಡ: ಕೃಷ್ಣ ಬೈರೇಗೌಡ

Spread the love

ಬೆಂಗಳೂರು: ಪಾದಾಚಾರಿ ಮಾರ್ಗದಲ್ಲಿ ಮೋಟಾರು ವಾಹನ ಚಲಾಯಿಸುವವರಿಗೆ ವಿಧಿಸುತ್ತಿದ್ದ ದಂಡದ  ಮೊತ್ತವನ್ನು 5,000 ರೂ.ಗಳಿಗೆ ಹೆಚ್ಚಿಸುವಂತೆ ಒತ್ತಾಯಿಸಿ ಸಚಿವ ಕೃಷ್ಣ ಬೈರೇಗೌಡ  ಅವರು ಸಾರಿಗೆ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಬುಧವಾರ ಬೆಂಗಳೂರು ನಗರ ಟ್ರಾಫಿಕ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಸಾರ್ವಜನಿಕರ ನಡೆಯುವ ಹಕ್ಕನ್ನ ಖಚಿತಪಡಿಸುವ ಸಲುವಾಗಿ ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಐದೂ ಪಾಲಿಕೆಯ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕೆಲಸಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಹೀಗೆ ಬೀದಿಬದಿ ವ್ಯಾಪಾರಿಗಳಿಂದ ತೆರವಾದ ಜಾಗದಲ್ಲಿ ಯಾವುದೇ ರೀತಿಯ ಮೋಟಾರು ವಾಹನಗಳನ್ನ ಚಲಾಯಿಸುವುದು ಸರಿಯಲ್ಲ. ಇಂತಹ ಕೃತ್ಯಗಳನ್ನ ಸಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಬೇಸರ ಹೊರಹಾಕಿದರು.

ವಾಹನ ಸವಾರರು ಯಾವುದೇ ಭಯ ಇಲ್ಲದೇ ಒತ್ತುವರಿ ತೆರವಾಗಿರುವ ಪಾದಚಾರಿ ಮಾರ್ಗದಲ್ಲಿ ಚಲಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಹಲವರು ಈಗಾಗಲೇ ನನಗೆ ದೂರು ನೀಡಿದ್ದಾರೆ. ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸುವಾಗ ಅಪಘಾತಗಳಾದ್ರೆ ಯಾರು ಹೊಣೆ? ಹೀಗಾಗಿ ಟ್ರಾಫಿಕ್ ಪೊಲೀಸರು ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನ ಜರುಗಿಸಬೇಕು. ಅಲ್ಲದೇ, ದಂಡದ ಮೊತ್ತ ಅಧಿಕವಾದ್ರೆ ಮಾತ್ರ ಇಂತಹ ಅಪರಾಧಗಳನ್ನ ತಡೆಯಲು ಸಾಧ್ಯ. ಹೀಗಾಗಿ ಪಾದಾಚಾರಿ ಮಾರ್ಗದಲ್ಲಿ ವಾಹನ ಚಲಾಯಿಸಿದರೆ ಪ್ರಸ್ತುತ ಚಾಲ್ತಿಯಲ್ಲಿರುವ 500 ರೂ. ದಂಡವನ್ನ 5,000 ರೂ.ಗೆ ಏರಿಸುವಂತೆ ಸಾರಿಗೆ ಇಲಾಖೆಗೆ ಪತ್ರ ಬರೆದು ಒತ್ತಾಯಿಸುತ್ತೇನೆ ಎಂದು ಸಭೆಯಲ್ಲಿ ಸಚಿವರು ತಿಳಿಸಿದರು.

ಮುಖ್ಯ ರಸ್ತೆಗಳಲ್ಲಿ ಪಾರ್ಕಿಂಗ್ ಕಾನೂನು ಪಾಲಿಸಲು ಸೂಚನೆ
ಆರ್ಟಿಲಿಯರ್ ಹಾಗೂ ಸಬ್ ಆರ್ಟಿಲಿಯರ್ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಲೇಬಾರದು ಎಂಬುದು ನನ್ನ ಅಭಿಪ್ರಾಯ. ಈ ನಿಯಮವನ್ನು ಜಾರಿಗೊಳಿಸುವುದು ವಾಸ್ತವದಲ್ಲಿ ಕಷ್ಟಸಾಧ್ಯ. ಆದರೆ, ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳನ್ನಾದರೂ ಪಾಲಿಸಿ ಎಂದು ಅವರು ಅಧಿಕಾರಿಗಳನ್ನು ಒತ್ತಾಯಿಸಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಆಲ್ಟರ್ನೇಟ್ ಪಾರ್ಕಿಂಗ್” ಅಥವಾ ʻಒನ್-ಸೈಡ್ ಪಾರ್ಕಿಂಗ್ʼ  ಎಂಬ ಪರ್ಯಾಯ ಪಾರ್ಕಿಂಗ್ ವ್ಯವಸ್ಥೆ ಚಾಲ್ತಿಯಲ್ಲಿದೆ. ಆದರೆ, ವಾಹನ ಸವಾರರು ಈ ನಿಯಮ ಪಾಲಿಸುತ್ತಿಲ್ಲ. ತಿಂಗಳ ಎಲ್ಲಾ ದಿನಗಳಲ್ಲೂ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲುಗಡೆ ಮಾಡಲಾಗುತ್ತಿದೆ. ಪರಿಣಾಮ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಉಲ್ಬಣಿಸುತ್ತಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮವನ್ನು ಪಾಲಿಸಲು ಇರುವ ಸಮಸ್ಯೆಯಾದರೂ ಏನು? ಎಂದು ಅವರು ಸಭೆಯಲ್ಲಿ ಅಸಮಾಧಾನ ಹೊರಹಾಕಿದರು.

ಚಾಲ್ತಿಯಲ್ಲಿರುವ ನಿಯಮ ಪಾಲನೆಗೆ ಹೊಸದಾಗಿ ಯಾವುದೇ ಅಧಿಸೂಚನೆ ಹೊರಡಿಸಬೇಕಿಲ್ಲ. ಇನ್ನಾದರೂ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಪರ್ಯಾಯ ಪಾರ್ಕಿಂಗ್ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ. ಪ್ರತಿದಿನ ರಸ್ತೆಯ ಒಂದು ಬದಿಯಲ್ಲಿ ಕನಿಷ್ಟ 7 ರಿಂದ 8 ಅಡಿ ಜಾಗ ಉಳಿಯಲಿದೆ. ವಾಹನ ಸವಾರರಿಗೂ ಇದರಿಂದ ಅನುಕೂಲವಾಗಲಿದ್ದು, ವಾಹನ ದಟ್ಟಣೆಯನ್ನು ಒಂದು ಹಂತಕ್ಕೆ ನಿಯಂತ್ರಿಸಬಹುದು ಎಂದರು.

ಜನರಿಗೆ ಅರಿವು ಮೂಡಿಸದೆ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಲಕ್ಷಾಂತರ ಕೋಟಿ ಹಣ ಖರ್ಚು ಮಾಡಿದರೂ ಯಾವುದೇ ಪ್ರಯೋಜನವಾಗುವುದಿಲ್ಲ. ಹೀಗಾಗಿ ವಾಹನ ನಿಲುಗಡೆ ನಿಯಮಗಳ ಬಗ್ಗೆ ಮೊದಲು ಜನರಲ್ಲಿ ಅರಿವು ಮೂಡಿಸಿ. ನಗರದ ಮುಖ್ಯರಸ್ತೆಗಳಲ್ಲಿ ಪರ್ಯಾಯ ಪಾರ್ಕಿಂಗ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಪಾಲಿಸಿ ಎಂದು ಸಭೆಯಲ್ಲಿ ತಾಕೀತು ಮಾಡಿದರು.

ಸಿಗ್ಲ್‌ಗಳಲ್ಲಿ ಬಸ್ ನಿಲುಗಡೆಗೆ ಅವಕಾಶವಿಲ್ಲ;
ಇನ್ನೂ ಸಿಗ್ನಲ್‌ಗಳ ಬಳಿ ವಾಹನ ನಿಲುಗಡೆಗೊಳಿಸುವುದರಿಂದಲೂ ಟ್ರಾಫಿಕ್ ಸಮಸ್ಯೆ ಉಲ್ಬಣಿಸುತ್ತಿದೆ. ಹೀಗಾಗಿ ಬಿಎಂಟಿಸಿ ಬಸ್ ಸೇರಿದಂತೆ ಯಾವುದೇ ವಾಹನಗಳನ್ನೂ ಅನಗತ್ಯವಾಗಿ ಸಿಗ್ನಲ್‌ಗಳ ಬಳಿ ನಿಲ್ಲಿಸಲು ಅವಕಾಶ ನೀಡಬಾರದು. ಸಿಗ್ನಲ್‌ಗಳಿಂದ 750 ಮೀಟರ್ ಹಾಗೂ ಜಂಕ್ಷನ್‌ಗಳಿಂದ 500 ರೂ. ಅಂತರದಲ್ಲಿ ಯಾವುದೇ ಬಸ್ ನಿಲ್ದಾಣಗಳೂ ಇರುವಂತಿಲ್ಲ. ಬಸ್ ನಿಲ್ದಾಣಗಳು ಇದ್ದಲ್ಲಿ ಮೊದಲು ಸ್ಥಳಾಂತರಿಸಿ ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಯಿತು.

ಸಭೆಯಲ್ಲಿ ಸಂಚಾರಿ ಪೊಲೀಸ್ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಕಾರ್ತಿಕ್ ರೆಡ್ಡಿ, ಅಪರ ಆಯುಕ್ತರಾದ ಲತಾ ಆರ್, ಲೋಖಂಡೆ ಸ್ನೇಹಲ್ ಸುಧಾಕರ್, ಕವಿತಾ ರಾಜಾರಾಂ, ವೆಂಕಟಾ ಚಲಪತಿ, ನವೀನ್ ಕುಮಾರ್ ರಾಜು, ಮುಖ್ಯ ಅಭಿಯಂತರರು, ಸಂಚಾರಿ ಪೊಲೀಸ್ ವಿಭಾಗದ ಅಧಿಕಾರಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಸಾಕು ನಾಯಿ ಹೊತ್ತೊಯ್ದ ಚಿರತೆ

Spread the loveಮಡಿಕೇರಿ: ಕೊಡಗಿನ ಶನಿವಾರಸಂತೆ ಸಮೀಪದ ಹೊಸಗುತ್ತಿ ಗ್ರಾಮದಲ್ಲಿ ಕಾಣಿಸಿಕೊಂಡ ಚಿರತೆ ಹೊಂಚು ಹಾಕಿ ಸಾಕು ನಾಯಿಯನ್ನು ಹೊತ್ತೊಯ್ದಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ