ರಾಯಚೂರು: ಬಿಸಿಲನಾಡು ರಾಯಚೂರನ್ನು ಹಸಿರು ಜಿಲ್ಲೆಯನ್ನಾಗಿಸಲು ಜಿಲ್ಲಾ ಪೊಲೀಸ್ ಇಲಾಖೆ ನಿರಂತರವಾಗಿ ಶ್ರಮಿಸುತ್ತಿದೆ. ಕೊರೊನಾ ಲಾಕ್ ಡೌನ್ ಸಮಯದಲ್ಲೂ 20 ಸಾವಿರ ಸಸಿಗಳನ್ನು ಬೆಳೆಸಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಅವರು ಹಸಿರು ಜಿಲ್ಲೆಗಾಗಿ ಪೊಲೀಸ್ ಸಿಬ್ಬಂದಿ, ಸಾರ್ವಜನಿಕರೊಂದಿಗೆ 5 ಲಕ್ಷ ಸಸಿಗಳನ್ನು ನೆಡುವ ಪ್ರತಿಜ್ಞೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ರಾಯಚೂರಿನ ನಾಗರಿಕರ ಸಹಕಾರದೊಂದಿಗೆ ಹಾಲಿನ ಪ್ಯಾಕೆಟ್ ಗಳನ್ನು ಸಂಗ್ರಹಿಸಿ ಅದರಲ್ಲಿ ವಿವಿಧ ರೀತಿಯ ಬೀಜಗಳನ್ನು ಹಾಕಿ ಸಸಿಗಳನ್ನು ಬೆಳೆಸಿ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಸುಮಾರು 20 ಸಾವಿರ ಪಪ್ಪಾಯ, ಸೀತಾಫಲಾ, ಮಾವು, ಪೇರಲ, ಹುಣಸೆ, ನುಗ್ಗೆಕಾಯಿ, ಹೊಂಗೆ, ಅಲೊವೇರಾ ಸೇರಿದಂತೆ ವಿವಿಧ ರೀತಿಯ ಸಸಿಗಳನ್ನು ಬೆಳೆಸಿದ್ದಾರೆ.
ದಣಿವರಿಯದ ಕರೊನಾ ಲಾಕ್‍ಡೌನ್ ಕರ್ತವ್ಯದ ಮಧ್ಯೆ ಬಿಡುವಿನ ಸಮಯದಲ್ಲಿ ಪೊಲೀಸ್ ಸಿಬ್ಬಂದಿ ಸಸಿಗಳನ್ನು ನೆಡುವ ಕಾರ್ಯದ ಕಡೆ ಗಮನ ಹರಿಸಿ, ಅವುಗಳನ್ನು ಪೋಷಣೆ ಮಾಡುತ್ತಿದ್ದಾರೆ. ಪೊಲೀಸ್ ಸಿಬ್ಬಂದಿ ಪರಿಶ್ರಮದಿಂದ ಸುಮಾರು 20 ಸಾವಿರ ಸಸಿಗಳು ಸಿದ್ಧವಾಗಿವೆ. ಆದ್ದರಿಂದ ರಾಯಚೂರು ಜಿಲ್ಲೆಯ ನಾಗರಿಕರು ಹಲವಾರು ಕಾರ್ಯಕ್ರಮದಲ್ಲಿ ಭಾಗಿಯಾಗುವಾಗ ಇತರೆ ಉಡುಗೊರೆ ನೀಡುವ ಬದಲಾಗಿ ಸಸಿಗಳನ್ನು ಉಡುಗೊರೆಯಾಗಿ ನೀಡಿ ಜಿಲ್ಲೆಯನ್ನು ಹಸಿರು ಜಿಲ್ಲೆಯಾಗಿಸಲು ಸಹಕರಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಕೋರಿದ್ದಾರೆ.
ಸಸಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು, ಸಸಿಗಳು ಬೇಕಾದಲ್ಲಿ ಮೊಬೈಲ್ ಸಂಖ್ಯೆ 9480803806 ಅಥವಾ 9480803840ಕ್ಕೆ ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.