ರಾಯಚೂರು: ಬೈಕ್ ಕದ್ದು ಹುಚ್ಚನಂತೆ ನಟಿಸಿ ತಪ್ಪಿಸಿಕೊಳ್ಳುತ್ತಿದ್ದ ವಿಲಕ್ಷಣ ವರ್ತನೆಯ ಕುಖ್ಯಾತ ಬೈಕ್ ಕಳ್ಳನನ್ನು ನಗರದ ನೇತಾಜಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯಿಂದ 3.40 ಲಕ್ಷ ರೂ. ಬೆಲೆ ಬಾಳುವ 15 ಬೈಕ್‍ಗಳನ್ನು ಜಪ್ತಿ ಮಾಡಲಾಗಿದೆ. ಮಾನ್ವಿ ತಾಲೂಕಿನ ಹರವಿ ಗ್ರಾಮದ ತಾಯಪ್ಪ ಬಂಧಿತ ಆರೋಪಿ. ನೇತಾಜಿ ನಗರ ಸೇರಿದಂತೆ ವಿವಿಧ ಠಾಣೆಗಳಲ್ಲಿ ಆರೋಪಿ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು.
ಬೈಕ್ ಕದಿಯುವ ವೇಳೆ ಹುಚ್ಚನ ರೀತಿಯಲ್ಲಿ ವರ್ತನೆ ಮಾಡಿ ತಪ್ಪಿಸಿಕೊಳ್ಳುತ್ತಿದ್ದ ಕಳ್ಳ, ಪೊಲೀಸರಿಗೂ ಚಳ್ಳೆಹಣ್ಣು ತಿನ್ನಿಸಿದ್ದ. ಎಲ್ಲೆಂದರಲ್ಲಿ ಮಲಗಿ ರಾತ್ರಿ ವರೆಗೆ ಕಾದು ಬೈಕ್‍ಗಳನ್ನು ಕದಿಯುತ್ತಿದ್ದ ಆರೋಪಿ, ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಹೀಗಾಗಿ ಈತನ ಮೇಲೆ ಕಳ್ಳನೆಂದು ಅನುಮಾನ ಬರುತ್ತಿರಲಿಲ್ಲ. ಸಾರ್ವಜನಿಕರು ಸಹ ಸುಮ್ಮನೆ ಬಿಟ್ಟಿದ್ದಾರೆ. ರಾಯಚೂರು ಪೊಲೀಸರಿಗೆ ತಲೆನೋವಾಗಿದ್ದ ಆರೋಪಿ ಕೊನೆಗೂ ಸೆರೆ ಸಿಕ್ಕಿದ್ದಾನೆ.
ಕದ್ದ ಕೆಲ ಬೈಕ್‍ಗಳನ್ನು ಮೂರ್ನಾಲ್ಕು ಸಾವಿರ ರೂ.ಗೆ ಮಾರಾಟ ಮಾಡಿದ್ದಾನೆ. ಆರೋಪಿ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಪತ್ತೆ ಹಚ್ಚಿದ ತಂಡಕ್ಕೆ ಬಹುಮಾನ ನೀಡುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಹೇಳಿದ್ದಾರೆ.