ಬೆಂಗಳೂರು: ಮುಸ್ಲಿಮರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದಲ್ಲಿ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ತಮ್ಮ ವಿರುದ್ಧ ಚಿಕ್ಕಮಗಳೂರು ನಗರ ಠಾಣೆಯಲ್ಲಿ ದಾಖಲಾಗಿರುವ ಕೋಮುದ್ವೇಷ ಹರಡುವ ಆರೋಪದ ಪ್ರಕರಣ ರದ್ದುಕೋರಿ ಸಿ.ಟಿ. ರವಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ಪ್ರತಿವಾದಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು, ಮುಂದಿನ ವಿಚಾರಣೆ ಶುಕ್ರವಾರಕ್ಕೆ (ಜು. 31) ಮಂದೂಡಿತು.
ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಅರುಣ್ ಶ್ಯಾಮ್, ಯಾರ ಭಾವನೆಗೂ ಧಕ್ಕೆ ತರುವ ಕೆಲಸ ಅರ್ಜಿದಾರರು ಮಾಡಿಲ್ಲ. ಸಂಬಂಧವೇ ಇಲ್ಲದ ಮೂರನೇ ವ್ಯಕ್ತಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸುವ ಮೊದಲು ಪೊಲೀಸರು ಪ್ರಕ್ರಿಯೆ ಪಾಲಿಸಿಲ್ಲ. ಎಫ್ಐಆರ್ ಪ್ರತಿ ನೀಡದೆಯೇ ಪೊಲೀಸರು ನೋಟಿಸ್ ನೀಡಲು ಪ್ರಯತ್ನಿಸಿದ್ದಾರೆ. ಎ್ಐಆರ್ ಪ್ರತಿ ಪಡೆಯುವ ತಮ್ಮ ಮೂಲಭೂತ ಹಕ್ಕನ್ನು ಅವರು ಬಳಸಿ ಪ್ರಶ್ನಿಸಿದ್ದಾರೆ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್, ಪೊಲೀಸರು ನೋಟಿಸ್ ನೀಡಲು ಹೋದಾಗ ಅರ್ಜಿದಾರರು ಅಧಿಕಾರಿಗಳನ್ನು ನಿಂದಿಸಿ, ಬೆದರಿಸಿದ್ದಾರೆ. ತಮ್ಮ ವಕೀಲರು, ಬೆಂಬಲಿಗರ ನಡುವೆ ನಿಂತು ಕಾಂಗರೂ ಕೋರ್ಟ್ ನಡೆಸಿ ಪೊಲೀಸರನ್ನೆ ಪ್ರಶ್ನಿಸಿದ್ದಾರೆ. ಈ ಬಗ್ಗೆ ನಮ್ಮಲ್ಲಿ ವಿಡಿಯೋ ದಾಖಲೆಗಳಿವೆ ಎಂದು ತಿಳಿಸಿದರು.
ಮಧ್ಯಪ್ರವೇಶಿಸಿದ ನ್ಯಾಯಪೀಠ, ನೀವು ಮೆಲು ಧ್ವನಿಯಲ್ಲಿ ಪ್ರಶ್ನಿಸಿದ್ದೀರಾ ಅಥವಾ ಮೇಲು ಧ್ವನಿಯಲ್ಲಿ ಪ್ರಶ್ನಿಸಿದ್ದೀರಾ ಎಂದು ಅರ್ಜಿದಾರರ ವಕೀಲರನ್ನು ಕೇಳಿತು. ಉತ್ತರಿಸಿದ ವಕೀಲರು ನಾನು ವಿಡಿಯೋ ನೋಡಿದ್ದೇನೆ. ಅದರಲ್ಲಿ ಏನೂ ಇಲ್ಲ. ಅರ್ಜಿದಾರರು ಮೆಲು ಧ್ವನಿಯಲ್ಲಿಯೇ ತಮ್ಮ ಹಕ್ಕನ್ನು ಕೇಳಿದ್ದಾರೆ ಎಂದು ತಿಳಿಸಿದರು. ಅಂತಿಮವಾಗಿ ದಾಖಲೆಗಳನ್ನು ಸಲ್ಲಿಸಲು ತಿಳಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.
Laxmi News 24×7