ಗದಗ: ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟ ಹೆಸರು ಸೇರಿದಂತೆ ಹಲವು ಬೆಳೆಗಳು ಹೊಲದಲ್ಲೇ ಒಣಗುತ್ತಿವೆ. ರೈತರು ತಾವು ಬೆಳೆದ ಬೆಳೆಯನ್ನ ಕುಂಟೆ ಹೊಡೆದು ನಾಶ ಮಾಡುವ ಪರಿಸ್ಥಿತಿ ಎದುರಾಗಿದೆ.
ಕಳೆದ ವರ್ಷ ಅತಿವೃಷ್ಟಿಯಿಂದ ಬೆಳೆ ಹಾಳಾಗಿದ್ದರೆ, ಈ ವರ್ಷ ಅನಾವೃಷ್ಟಿ ರೈತರನ್ನು ಕಂಗಾಲು ಮಾಡಿದೆ. ಹೆಸರು, ಈರುಳ್ಳಿ, ಮೆಣಸಿನಕಾಯಿ, ಹತ್ತಿ, ಮೆಕ್ಕೆಜೋಳ ಹಾಗೂ ಶೇಂಗಾ ಸೇರಿದಂತೆ ಹಲವು ಬೆಳೆಗಳು ತೇವಾಂಶದ ಕೊರತೆಯಿಂದ ನೆಲಕಚ್ಚಿವೆ. ಹೊಲದಲ್ಲಿ ಹಸಿರು ಕಾಣಬೇಕಾದ ಜಾಗದಲ್ಲಿ ಒಣಗಿದ ಬೆಳೆ ಮಾತ್ರ ಕಾಣಿಸುತ್ತಿದೆ.
ಪ್ರತಿ ವರ್ಷ ಗದಗ ಜಿಲ್ಲೆಯಲ್ಲಿ 3 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚು ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಮಳೆ ಕೊರತೆಯಿಂದ ಕೇವಲ 1 ಲಕ್ಷ 17 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ನಡೆದಿದೆ. ಬಿತ್ತಿದ ಬೆಳೆಯೂ ಈಗ ಒಣಗಿ ಹೋಗುತ್ತಿರುವುದರಿಂದ ರೈತರು ಕಣ್ಣೀರಿಡುತ್ತಿದ್ದಾರೆ.
ಒಂದು ಎಕರೆಗೆ 20 ರಿಂದ 30 ಸಾವಿರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದಿದ್ದ ರೈತರ ಕೈಗೆ ಸಿಕ್ಕಿದ್ದು ನಿರಾಸೆ ಮಾತ್ರ. ಬೆಳೆ ಬರದೇ ಹೋದ ಕಾರಣ ಅನೇಕ ರೈತರು ತಮ್ಮ ಕೈಯಾರೆ ಬೆಳೆ ನಾಶ ಮಾಡುತ್ತಿದ್ದಾರೆ. ಸರ್ಕಾರ ಕೂಡಲೇ ಬರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ, ರೈತರಿಗೆ ಪರಿಹಾರ ಘೋಷಿಸಬೇಕು. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಅನ್ನದಾತರು ಆಗ್ರಹಿಸಿದ್ದಾರೆ.
Laxmi News 24×7