Breaking News
Home / ಜಿಲ್ಲೆ / ಸಂಕಷ್ಟಕ್ಕೊಳಗಾದ ವಿದ್ಯಾರ್ಥಿನಿಯರ ವಾಸಕ್ಕೆ ಮನೆಯನ್ನೇ ಬಿಟ್ಟುಕೊಟ್ಟ ಬದ್ರುದ್ದೀನ್

ಸಂಕಷ್ಟಕ್ಕೊಳಗಾದ ವಿದ್ಯಾರ್ಥಿನಿಯರ ವಾಸಕ್ಕೆ ಮನೆಯನ್ನೇ ಬಿಟ್ಟುಕೊಟ್ಟ ಬದ್ರುದ್ದೀನ್

Spread the love

ಮಂಗಳೂರು: ಲಾಕ್‍ಡೌನ್ ಸಂದರ್ಭದಲ್ಲಿ ಮಂಗಳೂರಿನಲ್ಲಿ ತೀವ್ರ ಸಂಕಷ್ಟಕ್ಕೆ ಒಳಗಾದ ಕೇರಳದ ಮೂವರು ವಿದ್ಯಾರ್ಥಿನಿಯರ ವಾಸಕ್ಕೆ ತನ್ನ ಮನೆಯನ್ನೇ ಬಿಟ್ಟುಕೊಟ್ಟು ಬದ್ರುದ್ದೀನ್ ಮಾನವೀಯತೆ ಮೆರೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲಾಯಿ ನಿವಾಸಿ ಬದ್ರುದ್ದೀನ್ ಯುವತಿಯರ ವಾಸಕ್ಕೆ ಮನೆ ಬಿಟ್ಟುಕೊಟ್ಟವರು. ಕೇರಳ ಮೂಲದ ಯುವತಿಯರಾದ ಆದಿರಾ, ನಿಲೋಫರ್, ಸೋನಿಯಾ ಲಾಕ್‍ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದರು. ಕೇರಳದ ತ್ರಿಶೂರ್, ಪಾಲಕ್ಕಾಡ್, ಕೋಝಿಕ್ಕೋಡ್ ಜಿಲ್ಲೆಯ ನಿವಾಸಿಗಳಾದ ಈ ವಿದ್ಯಾರ್ಥಿನಿಯರು ಮಂಗಳೂರಿನ ಬಲ್ಲಾಲ್ ಬಾಗ್ ನ ಖಾಸಗಿ ಕಾಲೇಜಿನಲ್ಲಿ ಫಿಸಿಯೋಥೆರಪಿ ವ್ಯಾಸಂಗ ಮಾಡುತ್ತಿದ್ದರು. ಕಾಲೇಜು ಸಮೀಪದ ಪಿ.ಜಿ.ಯಲ್ಲಿ ತಂಗಿದ್ದ ಇವರಿಗೆ ಲಾಕ್‍ಡೌನ್ ಸಂದರ್ಭದಲ್ಲಿ ಊಟ, ತಿಂಡಿಯ ಸಮಸ್ಯೆಯೊಂದಿಗೆ ಪಿ.ಜಿ.ಯನ್ನೂ ಖಾಲಿ ಮಾಡಬೇಕಾದ ಪರಿಸ್ಥಿತಿ ಬಂದಿತ್ತು.

ವಿದ್ಯಾರ್ಥಿನಿಯರು ತಮ್ಮ ಸಂಕಷ್ಟವನ್ನು ಮನೆಯವರಿಗೆ ತಿಳಿಸಿದ್ದರು. ಓರ್ವ ವಿದ್ಯಾರ್ಥಿನಿಯ ತಂದೆ, ಬೇರೆಯವರ ಮೂಲಕ ಬದ್ರುದ್ದೀನ್ ಅವರಿಗೆ ಪರಿಸ್ಥಿತಿ ತಿಳಿಸಿದ್ದಾರೆ. ತಕ್ಷಣವೇ ಬದ್ರುದ್ದೀನ್ ವಿದ್ಯಾರ್ಥಿನಿಯರನ್ನು ಸಂಪರ್ಕಿಸಿ ಅವರಿಗೆ ಉಳಿದುಕೊಳ್ಳಲು ಮನೆಯನ್ನು ನೀಡಿದ್ದಾರೆ. ಮೂಲತಃ ಬಂಟ್ವಾಳ ತಾಲೂಕಿನ ಕಲಾಯಿ ನಿವಾಸಿಯಾಗಿರುವ ಇವರು ಕುದ್ರೋಳಿಯ ಮಸೀದಿ ಬಳಿ ಬಾಡಿಗೆ ಮನೆಯೊಂದರಲ್ಲಿ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯೊಂದಿಗೆ ವಾಸವಿದ್ದಾರೆ. ತಾವು ವಾಸವಿದ್ದ ಮನೆಯನ್ನು ವಿದ್ಯಾರ್ಥಿನಿಯರಿಗೆ ಬಿಟ್ಟುಕೊಟ್ಟ ಬದ್ರುದ್ದೀನ್, ತಮ್ಮ ಕುಟುಂಬದೊಂದಿಗೆ ಕುದ್ರೋಳಿಯ ಅಳಕೆಯಲ್ಲಿರುವ ಅತ್ತೆ ಮನೆಗೆ ತೆರಳಿ ಲಾಕ್‍ಡೌನ್ ಮುಗಿಯುವವರೆಗೆ ಅಲ್ಲಿಯೇ ತಂಗಿದ್ದರು.

ಮೂರನೇ ಹಂತದ ಲಾಕ್‍ಡೌನ್ ಮುಕ್ತಾಯದ ಬಳಿಕ ಆನ್‍ಲೈನ್ ಪಾಸ್ ಪಡೆದು ವಿದ್ಯಾರ್ಥಿನಿಯರನ್ನು ಕೇರಳಕ್ಕೆ ಕಳುಹಿಸುವ ವ್ಯವಸ್ಥೆಯನ್ನು ಬದ್ರುದ್ದೀನ್ ಮಾಡಿದ್ದರು. ವಿದ್ಯಾರ್ಥಿನಿಯರನ್ನು ಕೇರಳ-ಕರ್ನಾಟಕ ಗಡಿ ತಲಪಾಡಿಗೆ ಖುದ್ದು ಅವರೇ ಕರೆದುಕೊಂಡು ಹೋಗಿ ಬೀಳ್ಕೊಟ್ಟಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯರು ತೆಗೆದ ಪೋಟೊವನ್ನು ಬದ್ರುದ್ದೀನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅವರ ಮಾನವೀಯ ಕಳಕಳಿಗೆ ಮೆಚ್ಚುಗೆ ವ್ಯಕ್ತವಾಗಿದೆ.


Spread the love

About Laxminews 24x7

Check Also

*ಶ್ರೀ ಜಡಿಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ*

Spread the loveಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ