ಬೆಳಗಾವಿ: ಮನೆಯಲ್ಲಿ ಫ್ರಿಡ್ಜ್ ಸ್ಫೋಟಗೊಂಡು ಒಂದೇ ಕುಟುಂಬದ ನಾಲ್ವರು ಸಜೀವ ದಹನಗೊಂಡಿರುವ ಚವ್ಹಾಟಗಲ್ಲಿಯ ಘಟನಾ ಸ್ಥಳಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ಚವ್ಹಾಟಗಲ್ಲಿಗೆ ಆಗಮಿಸಿದ ಸಚಿವರು ದುರಂತದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು, ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜಿಲ್ಲೆಗೆ 50 ಸಾವಿರ ನಿವೇಶನಗಳನ್ನು ನೀಡುವ ಯೋಜನೆ ರೂಪಿಸಲಾಗುತ್ತಿದೆ. ಸರ್ಕಾರ ಮನೆ ನಿರ್ಮಿಸಿಕೊಟ್ಟರೂ ಇಲ್ಲಿನ ಜನರು ಬೇರೆಡೆ ತೆರಳಿ ವಾಸಿಸಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಮನೆ ಇಲ್ಲದವರಿಗೆ ಅನುಕೂಲವಾಗುವ ರೀತಿಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಚವ್ಹಾಟಗಲ್ಲಿಯಲ್ಲಿ ಸಂಭವಿಸಿದ ದುರಂತದ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲಾಗುವುದು. ಘಟನೆಯಲ್ಲಿ ಸಂಭವಿಸಿದ ಜೀವಹಾನಿ, ಗಾಯಗೊಂಡವರಿಗೆ ನೀಡಲಾಗುತ್ತಿರುವ ಚಿಕಿತ್ಸೆ ಹಾಗೂ ಪರಿಹಾರದ ಕುರಿತು ಚರ್ಚಿಸಲಾಗುವುದು. ಅಲ್ಲದೆ, ಘಟನೆಗೆ ನಿಖರ ಕಾರಣವೇನು ಮತ್ತು ಇದಕ್ಕೆ ಯಾರು ಹೊಣೆ ಎಂಬುದರ ಕುರಿತು ವರದಿ ಬಂದ ಬಳಿಕ ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸಲಾಗುವುದು ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಆಸೀಫ್ ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಆಯುಕ್ತ ಪ್ರಕಾಶ್ ನಿಕಂ, ಮೇಯರ್ ಪ್ರೀತಿ ಕಾಮಕರ್ ಸೇರಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
Laxmi News 24×7