ಮಡಿಕೇರಿ: ಕೊರೊನಾ ಮಹಾಮಾರಿ ಬಡವರು, ಕೂಲಿಕಾರ್ಮಿಕರನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದ್ದು, ಲಾಕ್‍ಡೌನ್ ಆಗಿರುವುದರಿಂದ ಕೂಲಿ ಕೆಲಸ ಇಲ್ಲದೆ ಗಂಜಿ ಕುಡಿದು ಬದುಕು ದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಹಂಚಿತ್ತಿಟ್ಟು ಗ್ರಾಮದಲ್ಲಿ ಇಂತಹ ಮನಕಲಕುವ ಸ್ಥಿತಿ ಇದ್ದು, ಮಹಿಳೆ ಶಾಂತಮ್ಮ, ಬೆನ್ನು ಮೂಳೆ ಮುರಿದುಕೊಂಡು 13 ವರ್ಷದಿಂದ ಹಾಸಿಗೆ ಹಿಡಿದಿರುವ ಮಗನನ್ನು ಸಾಕುತ್ತಿದ್ದಾರೆ. ಕೂಲಿ ಮಾಡುತ್ತಿದ್ದ ಶಾಂತಮ್ಮ ಅದೇ ಹಣದಿಂದ ತನ್ನ ಮಗ ವಿಠಲನಿಗೆ ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ಲಾಕ್‍ಡೌನ್ ಆಗಿರುವ ಹಿನ್ನೆಲೆಯಲ್ಲಿ ಕೂಲಿಯೂ ಇಲ್ಲದೆ, ಮಗನಿಗೆ ಚಿಕಿತ್ಸೆ ಕೊಡಿಸಲು ಮಂಗಳೂರಿಗೆ ಕರೆದೊಯ್ಯಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ದುಡಿಮೆ ಇಲ್ಲದ್ದರಿಂದ ತಿನ್ನುವ ಅನ್ನಕ್ಕೂ ಆಹಾಕಾರ ಎದುರಾಗಿದೆ.
ಸರ್ಕಾರ ಕೊಟ್ಟಿರುವ ಕೇವಲ ಐದು ಕೆ.ಜಿ ಅಕ್ಕಿಯಿಂದ ನಾನೇನು ಮಾಡಲು ಸಾಧ್ಯ. ಸೊಂಟ ಮುರಿದುಕೊಂಡು ನಡೆದಾಡಲು ಸಾಧ್ಯವಿಲ್ಲದೆ ಹಾಸಿಗೆ ಹಿಡಿದಿರುವ ಮಗನಿಗೆ ಗಂಜಿ ಹಾಕಿ ಹಸಿವಿನಿಂದಲೇ ಇರುತ್ತೇನೆ. ಇದರ ನಡುವೆ ಯಾರಾದರೂ ಕೂಲಿ ಕೆಲಸಕ್ಕೆ ಕರೆದರೆ, ಕೆಲಸಕ್ಕೆ ಬಂದಿರುವವರು ಏನಾದ್ರು ಕೊಟ್ಟರೆ ಅದನ್ನು ತಿನ್ನುತ್ತೇನೆ ಎಂದು ಶಾಂತಮ್ಮ ಕಣ್ಣೀರಿಡುತ್ತಿದ್ದಾರೆ. ಈ ಮೂಲಕ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.