ಬೆಂಗಳೂರು : ಕಳೆದ ಒಂದೂವರೆ ತಿಂಗಳಿನಿಂದ ಮುಚ್ಚಿದ್ದ ಮಧ್ಯದ ಅಂಗಡಿಗಳು ನಾಳೆ ರಾಜ್ಯಾದ್ಯಂತ ( ಕಂಟೋನ್ಮೆಂಟ್ ಹೊರತುಪಡಿಸಿ) ತೆರೆಯಲಿದ್ದು, ಭಾನುವಾರದಿಂದಲೇ ಎಣ್ಣೆ ಪ್ರಿಯರು ದಾಂಗುಡಿ ಇಟ್ಟಿದ್ದಾರೆ. ಇದರ ನಡುವೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿ ಮಾರ್ಗಸೂಚಿ ಹೊರಡಿಸಿದೆ. ಜೊತೆಗೆ ಕೆಲವು ಷರತ್ತುಗಳನ್ನು ವಿಧಿಸಿದೆ.
ಕಂಟೈನ್‍ಮೆಂಟ್ ಝೋನ್ ವ್ಯಾಪ್ತಿಯ ಜನರಿಗೂ ಎಣ್ಣೆ ಬೇಕು ಅಂದರೆ ಸರಿಯಾಗಿ ಲಾಕ್‍ಡೌನ್ ನಿಯಮ ಪಾಲಿಸಿ ಸೋಂಕು ಮುಕ್ತ ಝೋನ್ ಆಗಬೇಕಿದೆ. ಸರಿಯಾಗಿ ನಿಯಮ ಪಾಲಿಸದಿದ್ದರೆ, ನೂಕು ನುಗ್ಗಲು ಉಂಟಾದರೆ ತಕ್ಷಣ ಮದ್ಯದಂಗಡಿ ಮುಚ್ಚುವುದಾಗಿ ಅಬಕಾರಿ ಸಚಿವ ನಾಗೇಶ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಮದ್ಯದಂಗಡಿ ತೆರೆಯುವ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದು, ಸನ್ನದುದಾರರಿಗೆ ಕೆಲವು ಸೂಚನೆಗಳನ್ನು ನೀಡಿದ್ದಾರೆ. ಅಲ್ಲದೇ ಒಬ್ಬರಿಗೆ ಎಷ್ಟು ಲೀಟರ್ ಮದ್ಯ ನೀಡಬೇಕು ಎನ್ನುವುದನ್ನು ಸ್ಪಷ್ಟಪಡಿಸಲಾಗಿದೆ.
ಪ್ರತಿ ಮದ್ಯದಂಗಡಿ ಮುಂಭಾಗ ಬ್ಯಾರಿಕೇಡ್ ಅಳವಡಿಸಬೇಕು, ಬ್ಯಾರಿಕೇಡ್ ನ ಒಳಭಾಗದಲ್ಲಿ ಕೇವಲ ಐದು ಜನ ಮಾತ್ರ ಇರಲು ಅವಕಾಶ ನೀಡಬೇಕು. ಬೆಳಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಅಂಗಡಿ ತೆರೆಯಲು ಅನುಮತಿ ನೀಡಬೇಕು, ಪೊಲೀಸರು ಇದ್ದರೂ, ಸ್ವಂತ ಖರ್ಚಿನಲ್ಲಿ ಭದ್ರತಾ ಸಿಬ್ಭಂಧಿಗಳನ್ನು ನೇಮಿಸಿಕೊಳ್ಳಬೇಕೆಂದು ಎಂದು ಮದ್ಯದಂಗಡಿ ಮಾಲೀಕರಿಗೆ ಸೂಚನೆ ನೀಡಲಾಯಿತು.
ಒಬ್ಬರಿಗೆ 4 ಫುಲ್ ಬಾಟಲ್ ಬಿಯರ್, 6 ಪಿಂಟ್ ಬಾಟಲಿ, 2.3 ಲೀ. (6 ಕ್ವಾಟರ್ ಅಥವಾ ಒಂದುವರೆ ಬಾಟಲ್) ಮಾತ್ರ ನೀಡುವಂತೆ ಆದೇಶ ನೀಡಲಾಗಿದೆ. ಮದ್ಯ ಹೊರತುಪಡಿಸಿ, ಕೌಂಟರ್ ನಲ್ಲಿ ಬೇರೆ ಪದಾರ್ಥ ಅಥವಾ ನೀರು ಕೂಡ ನೀಡುವಂತಿಲ್ಲ.ಮದ್ಯದಂಗಡಿ ಪಕ್ಕದ ಗೂಡಂಗಡಿಗಳಲ್ಲಿಯೂ ಮದ್ಯ ಸೇವನೆ ಮಾಡುವಂತಿಲ್ಲ. ಮದ್ಯ ಮಾರಾಟ ವೇಳೆ ಕೈಗವಸು ಮತ್ತು ಮಾಸ್ಕ್ ಬಳಸಲು ಸೂಚನೆ ನೀಡಲಾಗಿದೆ.